ಬೆಂಗಳೂರು :ನೆಲ-ಜಲ ವಿಚಾರದಲ್ಲಿ ರಾಜಕಾರಣ ಮಾಡದೇ ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೇವೆ. ನಮ್ಮ ರೈತರ ಬೆಳೆಗಳಿಗೆ ನೀರು ಬಿಡಬೇಕು. ಕುಡಿಯುವ ನೀರು ಪೂರೈಕೆ ಮಾಡಲು ಸಂಗ್ರಹ ಇಟ್ಟುಕೊಳ್ಳಬೇಕು ಎಂದು ತಿಳಿಸಿದ್ದೇವೆ. ಇದರ ಜೊತೆ ಸುಪ್ರೀಂ ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡನೆಯಾಗಬೇಕು ಮತ್ತು ಸಂಕಷ್ಟ ಸೂತ್ರ ಸಿದ್ಧಪಡಿಸುವ ಬಗ್ಗೆ ಪ್ರಸ್ತಾಪ ಸಲ್ಲಿಸುವಂತೆಯೂ ಸಲಹೆ ನೀಡಿದ್ದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸರ್ವಪಕ್ಷ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದವರು ಸಿಡಬ್ಲ್ಯೂ ಆದೇಶದ ಬಗ್ಗೆ ಸಮರ್ಥ ವಾದ ಮಂಡಿಸಿದ್ದೇವೆ ಎಂದಿದ್ದಾರೆ. ಆದರೆ ನೀವು ಸಮರ್ಥವಾಗಿ ವಾದ ಮಂಡಿಸಿಲ್ಲ ಎಂದು ನಾವು ಹೇಳಿದ್ದೇವೆ. ಯಾಕೆಂದರೆ ಇಂತಹ ಮಳೆ ಕೊರತೆಯ ಸಂಕಷ್ಟದ ಕಾಲದಲ್ಲಿ ಪ್ರತಿದಿನ 10 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವುದು ನಮ್ಮ ರಾಜ್ಯಕ್ಕೆ ಮಾರಕವಾಗಿದೆ. ತಮಿಳುನಾಡಿನ ಹಿತ ಕಾಪಾಡುವುದಕ್ಕಿಂತ ನಮ್ಮ ರಾಜ್ಯದ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದರು.
ಸುಪ್ರೀಂ ಕೋರ್ಟ್ ಮುಂದೆ ಈಗ ಪ್ರಕರಣ ಇದೆ. ಅಲ್ಲಿ ಸಮರ್ಥವಾದ ವಾದವನ್ನು ಮಂಡಿಸಬೇಕು. ವಾಸ್ತವ ವಿವರ ನೀಡಬೇಕು. ಸಂಕಷ್ಟದ ಬಗ್ಗೆ ಹೇಳಬೇಕು, ನಮ್ಮ ರೈತರ ಎಷ್ಟು ಬೆಳೆಗೆ ತೊಂದರೆಯಾಗುತ್ತಿದೆ. ನಮ್ಮ ರೈತರಿಗೆ ನಾವು ನೀರು ಬಿಟ್ಟಿಲ್ಲ. ನಮ್ಮ ರೈತರ ಪಾಲಿನ ನೀರು ತಮಿಳುನಾಡಿಗೆ ಬಿಡುವುದು ಸೂಕ್ತವಲ್ಲ ಎಂದು ಸ್ಪಷ್ಟವಾಗಿ ವಾದ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ. ಭಾಷೆ, ನೆಲ, ಜಲದ ವಿಷಯದಲ್ಲಿ ನಾವೆಲ್ಲಾ ಒಂದೆ. ಈ ಸಂಬಂಧ ಎಲ್ಲ ಸಹಕಾರ ನೀಡಲಿದ್ದೇವೆ, ಬೆಂಬಲ ಕೊಡುತ್ತೇವೆ ಎಂದು ಹೇಳಿದರು.
ಕಾವೇರಿ ನೀರು ಬಿಟ್ಟಿರುವುದರ ವಿರುದ್ಧ ರೈತರು ಹೋರಾಟ ಮಾಡುತ್ತಿದ್ದಾರೆ. ಕಾವೇರಿ ಜಲಾನಯನ ರೈತರಿಗೆ ನೀರು ಬಿಟ್ಟಿದ್ದರೆ ಇವತ್ತು ಆ ನೀರು ತಮಿಳುನಾಡಿಗೆ ಹೋಗುತ್ತಿರಲಿಲ್ಲ. ಸಕಾಲಕ್ಕೆ ನೀರು ಬಿಡದೆ ಅದನ್ನು ಹಿಡಿದಿಟ್ಟುಕೊಂಡಿತ್ತು, ಜಲಾಶಯದಲ್ಲಿ ನೀರಿರುವುದನ್ನು ಗಮನಿಸಿದ ತಮಿಳುನಾಡು ನೀರಿಗೆ ಬೇಡಿಕೆ ಇಟ್ಟಿದೆ. ಐಸಿಸಿ ಸಭೆಯನ್ನೇ ಮಾಡಿರಲಿಲ್ಲ, ಮೊನ್ನೆ ಸಭೆ ಮಾಡಿದ್ದಾರೆ. ಆದರೂ ನೀರು ಬರುತ್ತಿಲ್ಲ. ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ.
ಆದರೆ ಇದಕ್ಕೆ ಕೃಷಿ ಸಚಿವರು ಅಲ್ಲಿ ಖುಷ್ಕಿ, ಅರೆ ಖುಷ್ಕಿ ಬೆಳೆಯಿರಿ ಎನ್ನುತ್ತಾರೆ. ಇಲ್ಲಿ ನೋಡಿದರೆ ನೀರು ಬಿಡುತ್ತೇವೆ ಎನ್ನುತ್ತಾರೆ. ಹಾಗಾಗಿ ಸತ್ಯ ಏನು ಎಂದು ನಮ್ಮ ರೈತರಿಗೆ ಗೊತ್ತಿದೆ. ನಮ್ಮ ರೈತರ ಬೆಳೆಗಳಿಗೆ ನೀರು ಬಿಡಬೇಕು. ಕುಡಿಯುವ ನೀರು ಪೂರೈಕೆ ಮಾಡಲು ನೀರು ಇಟ್ಟುಕೊಳ್ಳಬೇಕು ಎಂದು ತಿಳಿಸಿದ್ದೇವೆ. ಮುಂದಿನ ಮಳೆ ವರ್ಷದವರೆಗೂ ನೀರು ಇರಿಸಿಕೊಳ್ಳಬೇಕು. ಇಲ್ಲಿ ಓಲೈಕೆ ರಾಜಕಾರಣದ ಪ್ರಶ್ನೆ ಬರಲ್ಲ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಹೇಳಿದರು.
ಕೆಆರ್ಎಸ್ನಲ್ಲಿ 93 ಟಿಎಂಸಿ ನೀರು ಇತ್ತು. ಈಗ 70 ಟಿಎಂಸಿ ಇದೆ. ಇದೇ ರೀತಿ ಮಾಡಿದರೆ ನಮ್ಮ ರೈತರಿಗೆ ನೀರು ಕೊಡೋದಕ್ಕೆ ಆಗಲ್ಲ. ಬರುವಂತಹ ಎರಡು ತಿಂಗಳ ನಂತರ ಬೆಂಗಳೂರಿಗೂ ಸಂಕಷ್ಟವಾಗುತ್ತದೆ. ಇದನ್ನು ಮನವರಿಕೆ ಮಾಡಿಕೊಡಬೇಕು. ತಮಿಳುನಾಡಿನ ವಕೀಲರು ಯಾವ ರೀತಿ ವಾದ ಮಾಡುತ್ತಾರೋ ಅದೇ ರೀತಿ ಪರಿಣಾಮಕಾರಿಯಾಗಿ ನಮ್ಮ ವಕೀಲರು ಕೋರ್ಟ್ಗೆ ವಸ್ತುಸ್ಥಿತಿಯ ವಿವರ ಹೇಳಬೇಕು ಎಂದು ಒತ್ತಾಯ ಮಾಡಿದ್ದೇವೆ. ನೆಲಜಲ ವಿಚಾರದಲ್ಲಿ ರಾಜಕಾರಣ ಮಾಡದೇ ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೇವೆ. ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಇದೆ. ಏನಾಗುತ್ತದೆ ಎಂದು ನೊಡೋಣಾ ಎಂದರು.