ಬೆಂಗಳೂರು: ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಪತಿ ಟಿ.ಪಿ.ಶ್ರೀನಿವಾಸ್ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿ ಸಮೀಪದ ಭಾರತ್ ಜೋಡೋ ಭವನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಬಿಜೆಪಿ ಮಾಜಿ ಕಾರ್ಪೊರೇಟರ್ ನರಸಿಂಹ ನಾಯ್ಕ್ ಕೂಡಾ ಕೈ ಪಕ್ಷ ಸೇರಿದ್ದಾರೆ. ಸಿಎಂ, ಡಿಸಿಎಂ ಇವರಿಗೆ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
"ಎ.ಕೃಷ್ಣಪ್ಪ ಪಕ್ಷ ಬಿಡಲು ನಾನೂ ಕಾರಣ":ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೂರ್ಣಿಮಾ ಶ್ರೀನಿವಾಸ್ ತಂದೆ ಎ.ಕೃಷ್ಣಪ್ಪ ಕಾಂಗ್ರೆಸ್ ಪಕ್ಷ ಬಿಡಲು ನಾನೂ ಸ್ವಲ್ಪ ಕಾರಣವಾಗಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಮಾಜಿ ಶಾಸಕಿಯಾಗಿದ್ದ ಪೂರ್ಣಿಮಾ ಎ.ಕೃಷ್ಣಪ್ಪರ ಮಗಳು 2013ರಲ್ಲಿ ಕೃಷ್ಣಪ್ಪರಿಗೆ ಟಿಕೆಟ್ ಕೊಡಲು ಸಾಧ್ಯವಾಗಿಲ್ಲ. ಅದಕ್ಕೆ ನಾನು ಸ್ವಲ್ಪ ಕಾರಣ. ನಾನೇ ಟಿಕೆಟ್ ತಪ್ಪಿಸಿದ್ದೇನೆ ಎಂದರೂ ಪೂರ್ಣಿಮಾ ನನ್ನ ಮೇಲೆ ಕೋಪ ಮಾಡಿಲ್ಲ. ಪಕ್ಷದ್ರೋಹ ಮಾಡಿದ ಭೈರತಿ ಬಸವರಾಜ್ಗೆ ಟಿಕೆಟ್ ಕೊಡಲು ಹೋಗಿ ಎ.ಕೃಷ್ಣಪ್ಪರಿಗೆ ಅನ್ಯಾಯವಾಯಿತು. ಅವರು ಕಾಂಗ್ರೆಸ್ ಕಟ್ಟಿದವರು. ಪೂರ್ಣಿಮಾ ಹಿರಿಯೂರು ಬಿಜೆಪಿಯಲ್ಲಿ ಶಾಸಕಿಯಾದರು. ಆದರೆ ಅವರ ರಕ್ತ ಕಾಂಗ್ರೆಸ್ನದ್ದಾಗಿತ್ತು. ಕಾಂಗ್ರೆಸ್ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪಕ್ಷ. ಸಮಾಜವನ್ನು ಜಾತಿ, ಧರ್ಮದ ಆಧಾರದ ಮೇಲೆ ಒಡೆಯುವ ಪಕ್ಷವಲ್ಲ ಎಂದರು.
ಬಿಜೆಪಿ ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಅದರಿಂದ ಸಮಾಜದಲ್ಲಿ ಅಸಮಾನತೆ ಕಾಣುತ್ತಿದ್ದೇವೆ. ಪೂರ್ಣಿಮಾರಿಗೆ ಬಿಜೆಪಿಯಲ್ಲಿದ್ದರೂ ಅವರ ಇಂಗಿತ, ಒಲವು ಕಾಂಗ್ರೆಸ್ ಪರ ಇತ್ತು. ಇನ್ನು ಮುಂದೆ ಪೂರ್ಣಿಮಾಗೆ ಅಥವಾ ಶ್ರೀನಿವಾಸ್ಗೆ ರಾಜಕೀಯ ಅನ್ಯಾಯ ಮಾಡಲು ಬಿಡುವುದಿಲ್ಲ. ಜಾತ್ಯತೀತ ತತ್ವ ಎಂದುಕೊಂಡು, ಜಾತ್ಯತೀತ ಹೆಸರು ಇಟ್ಟುಕೊಂಡ ಪಕ್ಷ ಈಗ ಕೋಮುವಾದಿ ಪಕ್ಷದ ಜತೆ ಸೇರಿದ್ದಾರೆ. ಯಾವತ್ತೂ ಕಾಂಗ್ರೆಸ್ ಪಕ್ಷ ಕೋಮುವಾದ ಪಕ್ಷದ ಜತೆ ಸೇರಲ್ಲ. ಯಾವ ಜನರು ಅವಕಾಶದಿಂದ ವಂಚಿತರಾಗಿದ್ದಾರೆ, ಸಾಮಾಜಿಕ, ಶೈಕ್ಷಣಿಕವಾಗಿ ಶಕ್ತಿ ಇಲ್ಲದವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯವರ ಮನೆ ದೇವರೇ ಸುಳ್ಳು ಎಂದು ಕಿಡಿ ಕಾರಿದರು.