ಬೆಂಗಳೂರು: ಅಕ್ರಮ ಹಣಕಾಸು ಆರೋಪ ಪ್ರಕರಣ ಸಂಬಂಧ ಬಿಬಿಎಂಪಿ ಮಾಜಿ ಸದಸ್ಯೆ ಸಿ. ಜಿ ಗೌರಮ್ಮ ದಂಪತಿಗೆ ಸೇರಿದ 3. 35 ಕೋಟಿ ರೂ. ಮೌಲ್ಯ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಟ್ಟುಗೋಲು ಮಾಡಿದ್ದಾರೆ.
ಬಿಬಿಎಂಪಿ ಅಜಾದ್‌ನಗರ ವಾರ್ಡ್ ಮಾಜಿ ಸದಸ್ಯೆ ಸಿ. ಜಿ ಗೌರಮ್ಮ ವಿರುದ್ಧ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕಾರ್ಪೋರೇಟರ್ ಆಗಿದ್ದಾಗ ಗೌರಮ್ಮ, ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು.
ತನ್ನ ಪತಿ ಗೋವಿಂದರಾಜು ಜೊತೆ ಸೇರಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿದ್ದರು. ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮತ್ತು ಸ್ಥಿರಾಸ್ತಿಗಳನ್ನು ಸಂಪಾದನೆ ಮಾಡಿದ್ದರು. ಅಂದರೆ 2010ರಿಂದ 13ರ ವರೆಗೆ 3.46 ಕೋಟಿ ರೂ. ಮೌಲ್ಯದ ಕೃಷಿ ಭೂಮಿ, ಮನೆ, ಪ್ಲ್ಯಾಟ್ ಮತ್ತು ವಾಣಿಜ್ಯ ಮಳಿಗೆಗಳನ್ನು ಸಂಪಾದನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಲೋಕಾಯುಕ್ತ ಪೊಲೀಸರು, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಇದರ ಆಧಾರದ ಮೇಲೆ ಅಕ್ರಮ ಹಣಕಾಸು ಸಂಪಾದನೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು 3.35 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. 2012ರಲ್ಲಿ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದಲ್ಲಿ ಗೌರಮ್ಮ, ಗೋವಿಂದರಾಜು ಸೇರಿ 12 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ 2020ರಲ್ಲಿ ತೀರ್ಪು ನೀಡಿತ್ತು.
ಓದಿ:ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಗೌರಮ್ಮಗೆ ಸೇರಿದ 3. 35 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಜಪ್ತಿ