ಬೆಂಗಳೂರು :ದೇಶದಲ್ಲಿ ಎನ್ ಟಿ ರಾಮರಾವ್ ಹೊಸ ಚರಿತ್ರೆಯನ್ನೇ ಸೃಷ್ಟಿ ಮಾಡಿದ್ದರು. ಅವರು ನನಗೆ ದೇವರು. ರಾಜಕೀಯ ಕಲಿಸಿದ ಗುರು, ರಾಜಕೀಯ ನಡವಳಿಕೆಗಳನ್ನು ಕಲಿಸಿಕೊಟ್ಟರು. ನನಗೆ ಜನ್ಮ ನೀಡಿದ್ದು ತಂದೆ ತಾಯಿಯಾದರೆ, ರಾಜಕೀಯ ಜನ್ಮ ನೀಡಿದ್ದು ಎನ್ ಟಿ ರಾಮರಾವ್ ಅವರು ಎಂದು ಆಂಧ್ರ ಪ್ರದೇಶದ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಮೂರ್ತಿ ಬಣ್ಣಿಸಿದ್ದಾರೆ.
ತೆಲುಗು ಫ್ರೈಡ್ ಹಾಗೂ ತೆಲುಗು ಸಂಘಗಳು ಜಂಟಿಯಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಎನ್ ಟಿ ರಾಮರಾವ್ ಅವರ 100ನೇ ವರ್ಷದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಬಂಧು, ಉತ್ತಮ ಸ್ನೇಹಿತರು, ಗುರುವು ಹೌದು, ಸ್ನೇಹಿತರು ಹೌದು. ಎನ್ ಟಿ ರಾಮರಾವ್ ಅವರು ಸ್ನೇಹಿತರಂತೆ ಮಾತನಾಡುತ್ತಿದ್ದರು. ಕಲ್ಮಶ ಇಲ್ಲದೆ ಮಾತನಾಡುತ್ತಿದ್ದರು ಎಂದು ಹೇಳಿದರು.
ಅವರು ನನ್ನ ಗುರುತಿಸಿ ರಾಜಕೀಯ ಭಿಕ್ಷೆ ನೀಡದಿದ್ದರೆ ನನ್ನನ್ನು ಯಾರು ಗುರುತಿಸುತ್ತಿದ್ದರು. ರಾಜಕೀಯದಲ್ಲಿ ಇರುವುದಕ್ಕೆ ಪ್ರಮುಖ ಕಾರಣ ಎನ್ ಟಿ ರಾಮರಾವ್. ಪ್ರಪಂಚದಲ್ಲಿ ತಿಳಿದಿರುವ ಕೃಷ್ಣ ಯಾರೆಂದು ಹೇಳುವುದಾದರೆ ಅದು ಎನ್ ಟಿ ಆರ್ ಅವರೇ. ನಾವು ಕಾಲೇಜ್ನಲ್ಲಿ ಓದುತ್ತಿದ್ದಾಗ, ಅವರ ಆಲೋಚನೆ ನೋಡಿ ಅವರ ಜೊತೆ ನಾವು ನಡೆಯಲು ಆರಂಭಿಸಿದೆವು. ಅವರ ಜೊತೆ ಹೋದಾಗ, ಕೆಲವು ಕುಹಕವಾಡಿದರು. ವೇಶ ಹಾಕುವವರ ಜೊತೆ ತಿರುಗುತ್ತಿಯಾ, ಇದೊಂದು ಪಾರ್ಟಿನಾ ಎಂದು ವ್ಯಂಗ್ಯವಾಡಿದ್ದರು. ಅವರ ಸಿನಿಮಾ ನೋಡಿ ಅವರ ಆಲೋಚನೆ, ಸಮಾಜಕ್ಕೆ ಮೆಸೇಜ್ ಕೊಡುವಂತಹ ಸಿನಿಮಾ ಮಾಡುತ್ತಿದ್ದರು ಎಂದರು.
ಎನ್ ಟಿ ರಾಮರಾವ್ ಅವರಿಗೆ ಭಾರತರತ್ನ ಶಿಫಾರಸು ಮಾಡಬೇಕು: ಬಡವರ ಪರವಾಗಿದ್ದ ಅವರು, ಮುಖ್ಯಮಂತ್ರಿಯಾಗಿ 2 ಕೆಜಿ ಅಕ್ಕಿ ಸೇರಿದಂತೆ ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದರು. ಆಂಧ್ರಪ್ರದೇಶಕ್ಕೆ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದರು. ಜೊತೆಗೆ ಸಿನಿಮಾ ರಂಗದಲ್ಲೂ ಉತ್ತುಂಗ ಸ್ಥಾನಕ್ಕೆ ಏರಿದರು. ಎನ್ ಟಿ ರಾಮರಾವ್ ಅವರಿಗೆ ಭಾರತರತ್ನ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಕರ್ನಾಟಕದ ಮಾಜಿ ಸಚಿವ ಮುನಿರತ್ನ ನಾಯ್ಡು ಮಾತನಾಡಿ, ಕನ್ನಡ ಚಲನಚಿತ್ರರಂಗದ ನಟಸಾರ್ವಭೌಮ ಡಾ ರಾಜ್ ಕುಮಾರ್ ಹಾಗೂ ತೆಲುಗು ಚಿತ್ರರಂಗದ ನಟಸಾರ್ವಭೌಮ ಆಗಿದ್ದಂತಹ ಡಾ ಎನ್ ಟಿ ರಾಮರಾವ್ ಒಂದೇ ಸಾರಿ ಹುಟ್ಟಿದ್ದು, ಮತ್ತೆ ಹುಟ್ಟುವುದಿಲ್ಲ.