ಬೆಂಗಳೂರು:ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ಭಾರತ. ಸಂವಿಧಾನದಲ್ಲಿ ಹೇಳಿರುವಂತೆ ಯಾವೊಬ್ಬ ಪ್ರಜೆಯೂ ನ್ಯಾಯದಾನದಿಂದ ವಂಚಿತನಾಗಬಾರದು ಅಥವಾ ತಾರತಮ್ಯಕ್ಕೆ ಒಳಗಾಗದೆ ಸಮಾನ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ 1996 ನವೆಂಬರ್ 9 ರಂದು ಕಾನೂನು ಸೇವೆಗಳ ಪ್ರಾಧಿಕಾರ ರಚನೆ ಮಾಡಲಾಯಿತು.
ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯ 1987ರ ಅಡಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ರಚನೆಯಾಗಿ 28 ವರ್ಷ ಕಳೆದಿದ್ದು, ಇದರಿಂದ ರಾಜ್ಯಾದ್ಯಂತ ಸಾವಿರಾರು ಬಡ, ಅವಿದ್ಯಾವಂತರಿಗೆ ಕಾನೂನು ನೆರವು ಲಭ್ಯವಾಗಿದೆ. ಇನ್ನೇನು ತನಗೆ ಕಾನೂನು ಹೋರಾಟ ನಡೆಸುವ ಶಕ್ತಿಯೇ ಇಲ್ಲ. ನಮಗೆ ನ್ಯಾಯ ಸಿಗುವುದು ಕಷ್ಟ ಎಂಬ ಆತಂಕದಲ್ಲಿದ್ದ ಜನತೆಗೆ ಈ ಪ್ರಾಧಿಕಾರ ಅಗತ್ಯ ನೆರವು ನೀಡುತ್ತಿದೆ. ಸಾವಿರಾರು ಜನರಿಗೆ ಕಾನೂನಿನ ಮೂಲಕ ಪರಿಹಾರ ಒದಗಿಸಲಾಗಿದೆ.
ಈ ಕಾಯ್ದೆಯ 1987ರ ಸೆಕ್ಷನ್ 12ರ ಮೂಲಕ ಸೂಚಿಸಲಾದ ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾವುದೇ ವ್ಯಕ್ತಿಯು ಉಚಿತ ಕಾನೂನು ಸೇವೆ ಪಡೆಯಬಹುದು. ಈ ಅಧಿನಿಯಮದ ಅಡಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಸೇವಾ ಸಮಿತಿ ಪ್ರಾಧಿಕಾರಗಳನ್ನು ರಚಿಸಲಾಗಿದೆ. ಈ ಪ್ರಾಧಿಕಾರಗಳು ಆಯಾ ಮಟ್ಟದಲ್ಲಿ ಜನರ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿವೆ.
ಯಾರಿಗೆ ಈ ಸೇವೆ ಲಭ್ಯ:ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದವರು, ಮಹಿಳೆಯರು ಮತ್ತು ಮಕ್ಕಳು, ಕಾರ್ಖಾನೆಯ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಕ್ಷಾಮ, ಭೂಕಂಪ, ಕೈಗಾರಿಕಾ ವಿನಾಶ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ತುತ್ತಾದದವರು, ಮತೀಯ ಕಾರಣದಿಂದ ದೌರ್ಜನ್ಯಕ್ಕೆ ಬಲಿಯಾದವರು, ಮಾನಸಿಕ ಅಥವಾ ಬೇರೆ ಯಾವುದೇ ನ್ಯೂನ್ಯತೆ ಹೊಂದಿರುವವರು, ಜೀತಕ್ಕೊಳಗಾದವರು ಮತ್ತು ವಾರ್ಷಿಕ 1 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯ ಇರುವ ಎಲ್ಲಾ ವರ್ಗದ ಜಾತಿಯ ಜನರು ಈ ಪ್ರಾಧಿಕಾರದಡಿಯಲ್ಲಿ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಪ್ರಾಧಿಕಾರದಿಂದ ಉಚಿತ ಸೇವೆಗಳು:ಉಚಿತ ಕಾನೂನು ಸೇವೆ, ಉಚಿತ ಕಾನೂನು ಸಲಹೆ, ರಾಜಿ ಸಂಧಾನ ಹಾಗೂ ಜನತಾ ನ್ಯಾಯಾಲಯ ಶಿಬಿರಗಳನ್ನು ಆಯೋಜಿಸುವುದು. ಕಾನೂನು ಅರಿವು ಮೂಡಿಸುವ ಸಲುವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸೇವೆಗಳನ್ನು ಜನತೆ ಪಡೆದುಕೊಳ್ಳಬಹುದಾಗಿದೆ.