ಕರ್ನಾಟಕ

karnataka

ETV Bharat / state

ಜೆಡಿಎಸ್ ಚುನಾವಣಾ ಪ್ರಚಾರ ಸಮಿತಿ ರಚನೆ: ಅಧ್ಯಕ್ಷರಾಗಿ ಸಿ.ಎಂ. ಧನಂಜಯ ನೇಮಕ

ದತ್ತಾ ಕಾಂಗ್ರೆಸ್​ ಸೇರಿದಾಗ ಕಡೂರಿನಲ್ಲಿ ಟಿಕೆಟ್​ ಆಕಾಂಕ್ಷಿಯಾಗಿದ್ದ ಸಿ.ಎಂ. ಧನಂಜಯ ಅವರನ್ನು ಜೆಡಿಎಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿದೆ.

Etv Bharat
Etv Bharat

By

Published : Apr 24, 2023, 9:56 PM IST

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ ನಿರ್ವಹಣೆಗೆ ರಾಜ್ಯ ಚುನಾವಣಾ ಪ್ರಚಾರ ಸಮಿತಿಯನ್ನು ರಚಿಸಲಾಗಿದೆ. ರಾಜ್ಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸಿ.ಎಂ. ಧನಂಜಯ ಅವರನ್ನು ನೇಮಕ ಮಾಡಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು, ಸಮಿತಿಗೆ 21 ಸದಸ್ಯರನ್ನು ನೇಮಕ ಮಾಡಿದ್ದಾರೆ.

ಕಾಂಗ್ರೆಸ್​ನಲ್ಲಿದ್ದ ಸಿ.ಎಂ.ಧನಂಜಯ ಅವರು ಇತ್ತೀಚೆಗೆ ಜೆಡಿಎಸ್​ಗೆ ಸೇರ್ಪಡೆಯಾಗಿದ್ದರು. ಕಡೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿಯೂ ಸಹ ಆಗಿದ್ದರು. ಆದರೆ, ಇತ್ತೀಚೆಗೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್​ಗೆ ಹೋಗಿದ್ದ ವೈ.ಎಸ್.ವಿ. ದತ್ತ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರು. ದತ್ತ ಅವರಿಗೆ ಜೆಡಿಎಸ್ ಮತ್ತೆ ಕಡೂರು ಕ್ಷೇತ್ರಕ್ಕೆ ಟಿಕೆಟ್ ನೀಡಿತು.

ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಎಂ. ಧನಂಜಯ ಅವರಿಗೆ ಬೇಸರವಾಗುವುದು ಸಹಜ. ಅದಕ್ಕಾಗಿ ಈ ಹಿಂದೆ ವೈ.ಎಸ್.ವಿ. ದತ್ತ ಅವರು ನಿರ್ವಹಿಸುತ್ತಿದ್ದ ಪ್ರಚಾರ ಸಮಿತಿ ಹುದ್ದೆಯನ್ನೇ ಧನಂಜಯ ಅವರಿಗೆ ನೀಡಿ ಜೆಡಿಎಸ್ ನಾಯಕರು ಮನವೊಲಿಸುವ ಕೆಲಸ ಮಾಡಿದ್ದಾರೆ.

ಚುನಾವಣೆಗೆ ಮೂರು ತಿಂಗಳಿರುವಾಗಲೇ ದತ್ತಾ ಅವರು ಪಕ್ಷ ಬಿಡುತ್ತಾರೆ ಎಂಬ ಮಾತುಗಳು ಹರಿದಾಡಿದ್ದವು. ಅದಕ್ಕೆ ತಕ್ಕಂತೆ ತಮ್ಮ ಆಪ್ತರ ಸಲಹೆ ಪಡೆದು ಕಡೂರು ಕ್ಷೇತ್ರದ ಟಿಕೆಟ್ ಆಕಾಂಕ್ಷೆಯೊಂದಿದೆ ದತ್ತಾ ಅವರು ಡಿ.ಕೆ. ಶಿವಕುಮಾರ್​ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಪಕ್ಷ ಸೇರಿದ್ದರು. ಆದರೆ ಕಾಂಗ್ರೆಸ್​ ಟಿಕೆಟ್​ ನೀಡದ ಹಿನ್ನಲೆಯಲ್ಲಿ ಮತ್ತೆ ಜನತಾದಳ ಪಕ್ಷಕ್ಕೆ ಸೇರಿದರು. ಈ ರಾಜಕೀಯ ಬೆಳವಣಿಗೆ ನಡುವೆ ಕಡೂರಿನಲ್ಲಿ ಜೆಡಿಎಸ್​ನಿಂದ ಸಿ.ಎಂ. ಧನಂಜಯ ಅವರು ಟಿಕೆಟ್​ ಆಕಾಂಕ್ಷಿ ಆಗಿದ್ದರು.

ಇದನ್ನೂ ಓದಿ:ಆಸ್ಪತ್ರೆಗೆ ದಾಖಲಾಗಿದ್ದ ಕುಮಾರಸ್ವಾಮಿ ಡಿಸ್ಚಾರ್ಜ್​ : ಚುನಾವಣಾ ಪ್ರಚಾರಕ್ಕೆ ರೆಡಿ

ಸಮಿತಿ ಹೀಗಿದೆ:ರಾಜ್ಯ ಚುನಾವಣಾ ಪ್ರಚಾರ ಸಮಿತಿಗೆ ಸಿ.ಎಂ. ಧನಂಜಯ ಅಧ್ಯಕ್ಷರಾದರೆ, ಸದಸ್ಯರಾಗಿ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಸಂಸದ ಪ್ರಜ್ವಲ್ ರೇವಣ್ಣ, ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಎನ್. ಅಪ್ಪಾಜಿಗೌಡ, ಮಾಜಿ ರಾಜ್ಯ ಸಭೆ ಸದಸ್ಯ ಕುಪೇಂದ್ರ ರೆಡ್ಡಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹ್ಮಮದ್ ಜಫ್ರುಲ್ಲಾಖಾನ್, ಎಂಎಲ್ ಸಿ ಎಸ್.ಎಲ್. ಭೋಜೇಗೌಡ, ಎ.ಪಿ.ರಂಗನಾಥ್, ಎಂಎಲ್ ಸಿ ಟಿ.ಎ.ಶರವಣ, ಮಾಜಿ ಶಾಸಕ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಇ.ಕೃಷ್ಣಪ್ಪ, ಮಲ್ಲಿಕಾರ್ಜುನ ಯಂಡಿಗೇರಿ, ಡಾ.ಕೆ.ಕೃಷ್ಣಮೂರ್ತಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಿನಳ್ಳಿ ತಾಯಣ್ಣ, ನಗರ ಮಹಿಳಾ ವಿಭಾಗದ ಅಧ್ಯಕ್ಷೆ ರೂತ್ ಮನೋರಮಾ, ರಾಜ್ಯ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್, ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಾಧ್ಯಕ್ಷ ಸಿ.ಎಂ.ನಾಗರಾಜು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಐಲೀನ್ ಜಾನ್ ಮಠಪತಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತಿ, ರಾಜ್ಯ ವಕ್ತಾರೆ ಯು.ಟಿ. ಫರ್ ಜಾನ್ ಅವರನ್ನು ನೇಮಕ ಮಾಡಿ ಗೌಡರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಜಗದೀಶ್​ ಶೆಟ್ಟರ್ ಈ ಚುನಾವಣೆಯಲ್ಲಿ ಸೋಲ್ತಾರೆ: ಅಮಿತ್ ಶಾ ಭವಿಷ್ಯ

ABOUT THE AUTHOR

...view details