ಬೆಂಗಳೂರು:ನಿಗಮಗಳ ಸ್ಥಾಪನೆ ಸಮುದಾಯದ ಹಿತ ಹೊಂದಿಲ್ಲ. ಬದಲಾಗಿ ಚುನಾವಣಾ ಹಿತಕ್ಕಾಗಿ ರಚನೆ ಮಾಡಲಾಗ್ತಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಹಿತಕ್ಕಾಗಿ ನಿಗಮಗಳ ರಚನೆ: ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಗಮ, ಪ್ರಾಧಿಕಾರಗಳ ರಚನೆ ಕಣ್ಣೊರೆಸುವ ತಂತ್ರ ಆಗಬಾರದು. ಕಾಡುಗೊಲ್ಲ ನಿಗಮ ಮಾಡಿ ಉಳಿದ ಕೆಲಸಗಳು ಆಗಿಲ್ಲ ಎಂದು ಅಸಮಾಧಾನ ಎದ್ದಿದೆ ಎಂದರು.
ಇದೀಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಆದೇಶ ನೀಡಿದ್ದಾರೆ. ಶಿರಾ ಚುನಾವಣೆಗೆ ಸರ್ಕಾರ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಿತು.
ಬಸವಕಲ್ಯಾಣ ಚುನಾವಣೆಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು, ಮಸ್ಕಿಯಲ್ಲಿ ಲಿಂಗಾಯತರಿದ್ದಾರೆ ಅಂತ ವೀರಶೈವ ಲಿಂಗಾಯತ ನಿಗಮಕ್ಕೆ ಆದೇಶ ಮಾಡಿದ್ದಾರೆ. ಸರ್ಕಾರದ ಈ ನಿಲುವು ಬಹಳ ಚೆನ್ನಾಗಿದೆ. ನಿಜಕ್ಕೂ ಸಮುದಾಯಗಳ ಮೇಲೆ ಸಿಎಂ ಯಡಿಯೂರಪ್ಪಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ತಕ್ಷಣದ ರಾಜಕೀಯ ಲಾಭಕ್ಕೆ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಇವೆಲ್ಲಾ ರಾಜಕೀಯ ತಂತ್ರಗಳಷ್ಟೇ ಎಂದರು.
ಕಾಲೇಜುಗಳು ಇಂದಿನಿಂದ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಾರೆ. ಅವರಿಗೆ ಎಲ್ಲವೂ ತಿಳಿದಿರುತ್ತದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ಬಿಜೆಪಿಯೊಂದಿಗೆ ಮಂಡ್ಯದಲ್ಲಿ ಹೊಂದಾಣಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೊಂದಾಣಿಕೆ ಸಾಮಾನ್ಯ. ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸುತ್ತಾರೆ. ಆದರೆ ಇದನ್ನು ರಾಜಕೀಯ ಪಕ್ಷಗಳವರೆಗೆ ತರುವುದು ಸರಿಯಲ್ಲ ಎಂದರು.