ಕರ್ನಾಟಕ

karnataka

ETV Bharat / state

ಜಾತಿ ಹೆಸರಲ್ಲಿ ನಿಗಮ -ಪ್ರಾಧಿಕಾರ ರಚನೆ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - Corporation authority 2020

ಜಾತಿ ಆಧಾರದಲ್ಲಿ ನಿಗಮ - ಮಂಡಳಿಗಳನ್ನು ರಚಿಸುತ್ತಿರುವ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ನಿಗಮ - ಮಂಡಳಿ ಸ್ಥಾಪನೆ ವಿಚಾರವಾಗಿ ಸರ್ಕಾರ ಕೈಗೊಳ್ಳುವ ಮುಂದಿನ ಕ್ರಮಗಳು ಅರ್ಜಿ ಕುರಿತು ನ್ಯಾಯಾಲಯದ ಹೊರಡಿಸುವ ಅಂತಿಮ ತೀರ್ಪಿಗೆ ಒಳ ಪಡುತ್ತದೆ ಎಂದು ಕೋರ್ಟ್​ ಸ್ಪಷ್ಟಪಡಿಸಿದೆ.

Formation of corporation-boards in caste name; High Court notice to Govt
ಹೈಕೋರ್ಟ್

By

Published : Dec 17, 2020, 9:49 PM IST

ಬೆಂಗಳೂರು :ಜಾತಿ ಆಧಾರದಲ್ಲಿ ನಿಗಮ - ಮಂಡಳಿಗಳನ್ನು ರಚಿಸುತ್ತಿರುವ ಸರ್ಕಾರದ ವಿರುದ್ಧ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವರ್ಮಾ ಅವರ ವಾದ ಆಲಿಸಿದ ಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮರಾಠ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಬಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ, ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.

ಇದನ್ನೂ ಓದಿ : ನಿಗಮ-ಮಂಡಳಿಗಳ ಅಧ್ಯಕ್ಷರ ಸ್ಥಾನಮಾನ ಸಚಿವರಿಗೆ ಸಮವಲ್ಲ: ಹೈಕೋರ್ಟ್

ಅಲ್ಲದೆ, ಈ ನಿಗಮ-ಮಂಡಳಿ ಸ್ಥಾಪನೆ ವಿಚಾರವಾಗಿ ಸರ್ಕಾರ ಕೈಗೊಳ್ಳುವ ಮುಂದಿನ ಕ್ರಮಗಳು ಅರ್ಜಿ ಕುರಿತು ನ್ಯಾಯಾಲಯದ ಹೊರಡಿಸುವ ಅಂತಿಮ ತೀರ್ಪಿಗೆ ಒಳಪಡುತ್ತದೆ ಎಂದು ಸ್ಪಷ್ಟಪಡಿಸಿತು.

ರಾಜ್ಯ ಸರ್ಕಾರ ಇತ್ತೀಚೆಗೆ ನಿರ್ದಿಷ್ಟ ಒಂದು ಜಾತಿ ಅಥವಾ ಸಮುದಾಯಕ್ಕಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ ಮಾಡಿ ಹಣಕಾಸು ಸೌಲಭ್ಯ ಒದಗಿಸಲು ಆದೇಶಿಸುತ್ತಿದೆ. ಜಾತಿ ಆಧಾರದ ಮೇಲೆ ನಿಗಮ ಮಂಡಳಿ ಸ್ಥಾಪಿಸುವುದಕ್ಕೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಜಾತಿ ಆಧಾರಿತ ನಿಗಮ ಮಂಡಳಿ ಸ್ಥಾಪಿಸುವಾಗ ಸರ್ಕಾರ ವೈಜ್ಞಾನಿಕ ಮಾನದಂಡ ಅನುಸರಿಸಿಲ್ಲ. ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಆರ್ಥಿಕವಾಗಿ ಮುಂದುವರಿದ ಸಮುದಾಯ - ಜಾತಿಗಳಿಗೂ ನಿಗಮ ಮಂಡಳಿ ಸ್ಥಾಪಿಸುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೇ, ಜಾತಿ ಆಧಾರದ ಮೇಲೆ ನಿಗಮ ಮಂಡಳಿ ಸ್ಥಾಪಿಸುವುದು ಸಮಾಜದಲ್ಲಿ ಜನರ ಮಧ್ಯೆ ತಾರತಮ್ಯ ಮೂಡಿಸುತ್ತದೆ. ಒಂದು ನಿರ್ದಿಷ್ಟ ಜಾತಿಗೆ ಲಾಭ ಮಾಡಿಕೊಟ್ಟು, ಉಳಿದ ಜಾತಿಗಳ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಸರ್ಕಾರದ ಈ ಕ್ರಮವು ಸಂವಿಧಾನದ ಪರಿಚ್ಛೇದ ಮತ್ತು 14 ಮತ್ತು 15(1)ಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಇದನ್ನೂ ಓದಿ : ವಿವಿಧ ನಿಗಮ-ಮಂಡಳಿಗಳಿಗೆ ನಿರ್ದೇಶಕರನ್ನು ನೇಮಿಸಿದ ರಾಜ್ಯಸರ್ಕಾರ

ಆದ್ದರಿಂದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಡಗಳ ಅಭಿವೃದ್ಧಿ ನಿಗಮ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮ ಮತ್ತು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವನ್ನು ಹೊರತುಪಡಿಸಿ, ಉಳಿದ ಎಲ್ಲಾ ಜಾತಿ, ಧರ್ಮ ಮತ್ತು ಸಮುದಾಯ ಆಧಾರಿತ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯು ಅಕ್ರಮ ಮತ್ತು ಕಾನೂನು ಬಾಹಿರ ಎಂದು ಘೋಷಿಸಬೇಕು. ಆ ನಿಗಮ ಮಂಡಳಿಗಳನ್ನು ನಿಷ್ಕ್ರಿಯಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದೇ ವಿಚಾರವಾಗಿ ವಕೀಲ ಎಸ್. ಬಸವರಾಜು ಅವರೂ ಪಿಐಎಲ್ ದಾಖಲಿಸಿದ್ದು, ವಿಚಾರಣೆಗೆ ನಿಗದಿಯಾಗಬೇಕಿದೆ. ಅರ್ಜಿಯಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜಾತಿ ಆಧಾರದಲ್ಲಿ ವಿಶೇಷ ಆದ್ಯತೆ ನೀಡಲು ಜಾತಿವಾರು ನಿಗಮ-ಮಂಡಳಿಗಳನ್ನು ರಚಿಸಿರುವ ಸರ್ಕಾರದ ಕ್ರಮ ಸಂವಿಧಾನ ಬಾಹಿರ. ಹೀಗಾಗಿ ಜಾತಿ ಆಧಾರದಲ್ಲಿ ಸ್ಥಾಪಿಸಿರುವ ನಿಗಮಗಳನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details