ಕರ್ನಾಟಕ

karnataka

ETV Bharat / state

ಎನ್​ಇಪಿ ಬದಲಿಗೆ ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ - ಈಟಿವಿ ಭಾರತ ಕರ್ನಾಟಕ

ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮೇಲೆ ಹೇರಲಾಗದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

formation-of-committee-for-formulate-new-education-policy-says-cm-siddaramaiah
ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

By ETV Bharat Karnataka Team

Published : Aug 21, 2023, 7:37 PM IST

Updated : Aug 21, 2023, 8:29 PM IST

ಬೆಂಗಳೂರು: "ಶಿಕ್ಷಣ ನೀತಿ ನಿರೂಪಣೆ ರಾಜ್ಯದ ವಿಷಯ. ಈ ಹಿನ್ನೆಲೆಯಲ್ಲಿ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಶಿಕ್ಷಣ ನೀತಿ ಕುರಿತಂತೆ ನಡೆಸಲಾದ ಸಭೆಯಲ್ಲಿ ಈ ವಿಷಯ ತಿಳಿಸಿದರು.

"ಶಿಕ್ಷಣಕ್ಕೆ ಕೇಂದ್ರ ಸರ್ಕಾರ ನೀತಿ ರೂಪಿಸಲು ಸಾಧ್ಯವಿಲ್ಲ. ಏಕೆಂದರೆ ಅದು ರಾಜ್ಯದ ವಿಷಯ. ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮೇಲೆ ಹೇರಲಾಗದು. ಹೀಗೆ ಹೇರಲು ಹೊರಟಿರುವುದು ಒಂದು ಹುನ್ನಾರ. ಬಹು ಸಂಸ್ಕೃತಿ, ಬಹುತ್ವ ಇರುವ ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಮಾಡಲಾಗದು. ಆದ್ದರಿಂದ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು" ಎಂದು ಹೇಳಿದರು.

ಶಿಕ್ಷಣ ನೀತಿ ಕುರಿತಂತೆ ನಡೆದ ಸಭೆ

"ಬಿಜೆಪಿ ಆಳ್ವಿಕೆಯ ಇತರ ರಾಜ್ಯಗಳೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿವೆ. ಕೇರಳ, ತಮಿಳುನಾಡು ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದಿಲ್ಲ ಎಂದು ಕೇಂದ್ರಕ್ಕೆ ಸ್ಪಷ್ಟಪಡಿಸಿವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಕೇಂದ್ರ ಪುರಸ್ಕೃತ ಯೋಜನೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸುವುದರಿಂದ ರಾಜ್ಯಕ್ಕೆ ಅನ್ಯಾಯವಾಗಲಾರದು" ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

"ಇದರಿಂದ ಬಡವರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದವರು, ಗ್ರಾಮೀಣ ಪ್ರದೇಶದವರಿಗೆ ತೊಂದರೆಯಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಪ್ರತಿ ವರ್ಷ ಪ್ರಮಾಣ ಪತ್ರ ನೀಡಿದರೂ, ಒಂದು ವರ್ಷ, ಎರಡು ವರ್ಷ ಓದಿದವರಿಗೆ ಎಷ್ಟು ಉದ್ಯೋಗಾವಕಾಶ ದೊರೆಯಲು ಸಾಧ್ಯ? ಉದ್ಯೋಗಾವಕಾಶ ದೊರೆತ ಬಡವರ ಮಕ್ಕಳಿಗೆ ಮತ್ತೆ ಓದಲು ಎಷ್ಟು ಅವಕಾಶ ದೊರೆಯುವುದು?. ಈ ಶಿಕ್ಷಣ ನೀತಿ ಜಾರಿಗೊಳಿಸಲು ಅಗತ್ಯ ಮೂಲಸೌಲಭ್ಯಗಳು ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ. ಇದರಿಂದ ಅನಗತ್ಯ ಗೊಂದಲಗಳು ಸೃಷ್ಟಿಯಾಗಿದೆ" ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಇದ್ದರು.

ಇದನ್ನೂ ಓದಿ:IBPS ಪರೀಕ್ಷೆ ಕನ್ನಡದಲ್ಲಿ ಏಕಿಲ್ಲ?: ಎಎಪಿ ಉಪಾಧ್ಯಕ್ಷ ರಮೇಶ್ ಬೆಲ್ಲಂಕೊಂಡ

ಇತ್ತೀಚಿಗೆ, ಕರ್ನಾಟಕ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್​ಇಪಿ)ಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣ ರದ್ದುಗೊಳಿಸಲಾಗುವುದು" ಎಂದಿದ್ದರು.

"ಅಗತ್ಯವಾದ ಕೆಲವು ಸಿದ್ಧತೆಗಳನ್ನು ಮಾಡಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಬೇಕಿದೆ. ಈ ವರ್ಷ ಅದಕ್ಕೆ ಸಮಯ ಇರಲಿಲ್ಲ. ಚುನಾವಣೆ ಫಲಿತಾಂಶ ಬಂದು ಸರ್ಕಾರ ರಚನೆ ಆಗುವ ವೇಳೆಗೆ ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಮಧ್ಯದಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣದಿಂದ ಈ ವರ್ಷ ಹಾಗೆಯೇ ಮುಂದುವರೆದಿದೆ" ಎಂದು ಹೇಳಿದ್ದರು.

Last Updated : Aug 21, 2023, 8:29 PM IST

ABOUT THE AUTHOR

...view details