ಬೆಂಗಳೂರು: ಅಲೆಮಾರಿ ಜನಾಂಗದ ಸ್ಥಿತಿಗತಿ ಕುರಿತು ಸಮಗ್ರ ಅಧ್ಯಯನ ನಡೆಸಲು ಆಯೋಗ ರಚಿಸಲಿದ್ದು, ಅಧ್ಯಯನ ವರದಿ ಪಡೆದು ನಂತರ ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚನೆ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದ ಕುಮಾರ್ ಪಾರ್ಕ್ನಲ್ಲಿರುವ ಕುಮಾರಕೃಪಾ ಅತಿಥಿಗೃಹದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಚಿಂತಕ ಸಿ ಎಸ್ ದ್ವಾರಕನಾಥ್ ನೇತೃತ್ವದಲ್ಲಿ ಅಲೆಮಾರಿ ಸಮುದಾಯಗಳ ಮುಖಂಡರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಅಲೆಮಾರಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು. ತುಳಿತಕ್ಕೊಳಗಾದ ಸಮುದಾಯಕ್ಕೆ ನೆರವಾಗಬೇಕು ಎನ್ನುವ ಆಯಾಮದಲ್ಲಿ ಹಲವು ಬೇಡಿಕೆಗಳನ್ನು ಒಳಗೊಂಡ ತಮ್ಮ ಅಹವಾಲು ಸಲ್ಲಿಕೆ ಮಾಡಿದರು.
ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, 23 ಅಲೆಮಾರಿ ಜನಾಂಗಕ್ಕೆ ಸೇರಿದ ಸಮುದಾಯಗಳ ಸಮಸ್ಯೆ ಬಗ್ಗೆ ಇಂದಿನ ಭೇಟಿ ವೇಳೆ ನಮ್ಮ ಮುಂದಿಟ್ಟಿದ್ದಾರೆ. ಕರಡಿ ಸಾಕುವವರು, ಮಾದಪ್ಪನ ಬೆಟ್ಟದಲ್ಲಿ ಪೂಜೆ ಮಾಡುವವರು, ಜಂಗಮರು, ಪಿಂಗಿ ಸಮುದಾಯ ಸೇರಿ ಅನೇಕ ಸಮುದಾಯದವರು ಪ್ರಮಾಣಪತ್ರ ಇಲ್ಲದವರು, ಗುರುತಿಲ್ಲದವರನ್ನು ಗುರುತಿಸಬೇಕು. ಅದಕ್ಕಾಗಿ ಆಯೋಗ ರಚಿಸಬೇಕು ಎಂದಿದ್ದಾರೆ. ಯಾರಿಗೆ ಸರಿಯಾದ ಗುರುತು ಇಲ್ಲವೋ ಅವರನ್ನು ಗುರುತಿಸಬೇಕು ಎನ್ನುವ ಬೇಡಿಕೆ ಪರಿಗಣಿಸಿ ಈ ಸಂಬಂಧ ಅಗತ್ಯ ಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಸಂಪರ್ಕಿಸುತ್ತೇನೆ. ಯಾರು ತುಳಿತಕ್ಕೆ ಒಳಗಾಗಿದ್ದಾರೋ? ಅತಿ ಕೆಳ ಸಮುದಾಯ ಇದೆಯೋ ಅವರಿಗೆ ಸರಿಯಾದ ಗುರುತು ನೀಡಬೇಕಿದೆ ಇದು ನಮ್ಮ ಪಕ್ಷದ ಸಿದ್ಧಾಂತವೂ ಆಗಿದೆ. ಅವರಿಗೆ ಸರಿಯಾದ ನ್ಯಾಯ ಕೊಡುವ ಕೆಲಸ ಮಾಡಲಿದ್ದೇನೆ ಎಂದರು.