ಬೆಂಗಳೂರು:ಸದಾಶಿವ ಆಯೋಗದ ವರದಿ ಜಾರಿ ಕುರಿತು ಆದಷ್ಟು ಬೇಗ ಸಂಪುಟ ಉಪ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ವಿಧಾನ ಪರಿಷತ್ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಆರ್.ಧರ್ಮಸೇನ ಸದಾಶಿವ ಆಯೋಗದ ವರದಿ ಜಾರಿ ಕುರಿತು ಪ್ರಶ್ನೆಗೆ ಉತ್ತರಿಸಿದ ಸಚಿವ ರಾಮುಲು, ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಶಿಫಾರಸುಗಳನ್ನು ಮಾಡಲು 2018 ರ ಮಾರ್ಚ್ 8 ರಂದು ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಆದರೆ, ಈಗ ಸರ್ಕಾರ ಬದಲಾಗಿದೆ. ಹೀಗಾಗಿ ಸಂಪುಟ ಉಪ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ, ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಉಪ ಚುನಾವಣೆ ವೇಳೆ ಸದಾಶಿವ ಆಯೋಗದ ವರದಿ ಜಾರಿ ಮಾಡುವ ಭರವಸೆ ನೀಡಿದ್ದೀರಿ, ಆಗಿಲ್ಲ. ಈಗ ಮತ್ತೊಮ್ಮೆ ಉಪ ಚುಮಾವಣೆ ಬಂದಿದೆ. ಹೀಗೆ ಕಾಲ ದೂಡದೇ ಸದಾಶಿವ ಆಯೋಗದ ವರದಿ ಜಾರಿಗೊಳಿಸಿ, ಉಪಚುನಾವಣೆ ಎಂದು ಕಾಯಬೇಡಿ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ರಾಮುಲು, ಸಂಪುಟ ಉಪ ಸಮಿತಿ ರಚಿಸಬೇಕು. ಸದನದಲ್ಲಿಯೂ ಈ ಬಗ್ಗೆ ಚರ್ಚೆ ಆಗಬೇಕು. ಹಾಗಾಗಿ ಹಿರಿಯರ ಜೊತೆ ಮಾತನಾಡಿ ಈ ಬಗ್ಗೆ ನಿರ್ಧರಿಸಲಾಗುತ್ತದೆ. ಮೊದಲು ಸಂಪುಟ ಉಪ ಸಮಿತಿ ರಚನೆ ಮಾಡುತ್ತೇವೆ. ಸಮಿತಿ ನೀಡಿದ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚಿಸಲಾಗುತ್ತದೆ. ಆದಷ್ಟು ಶೀಘ್ರದಲ್ಲಿ ಇದನ್ನೆಲ್ಲಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಗುತ್ತಿಗೆದಾರರು ಆತ್ಮಹತ್ಯೆ ಹಾದಿ ಹಿಡಿಯಬೇಡಿ:ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಗುತ್ತಿಗೆದಾರರು ಆತ್ಮಹತ್ಯೆಯಂತಹ ಚಿಂತನೆ ಮಾಡಬಾರದು ಆದಷ್ಟು ಬೇಗ ಬಿಲ್ ಹಣ ಪಾವತಿ ಮಾಡಲಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸದಸ್ಯ ಗೋವಿಂದರಾಜು ಅವರ ಗುತ್ತಿಗೆದಾರರು ಆತ್ಮಹತ್ಯೆ ಹಾದಿ ಹಿಡಿಯುವ ಆತಂಕದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಪೆಂಡಿಂಗ್ ಬಿಲ್ ಇಂದಿನ ಸಮಸ್ಯೆ ಅಲ್ಲ. ಎಲ್ಲಾ ಸರ್ಕಾರಗಳಲ್ಲಿ ಬಜೆಟ್ ಅಲೋಕೇಷನ್ ಗೂ ಹೆಚ್ಚಿನ ಕಾಮಗಾರಿಗೆ ಅನುಮೋದನೆ ಮಾಡಿಕೊಡಲಾಗುತ್ತಿದೆ. ಹಾಗಾಗಿ ಬಿಲ್ ಬಾಕಿ ಉಳಿದುಕೊಳ್ಳಲಿದೆ ಆದರೆ, ಯಾವ ಗುತ್ತಿಗೆದಾರ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ, ಸಾಲ ಮಾಡಿ ಗುತ್ತಿಗೆ ಕಾಮಗಾರಿ ಮಾಡಿದ್ದೀರಿ. ಈಗ ಹಣಕಾಸು ಸ್ಥಿತಿ ಸುಧಾರಿಸುತ್ತಿದೆ. ಶೇ. 50 ರಷ್ಟು ಬಿಲ್ ಮೊತ್ತವನ್ನು ಮಾರ್ಚ್ ಅಂತ್ಯದಲ್ಲಿ ಬಿಡುಗಡೆ ಮಾಡಲು ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಚಾರ್ಮಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ಅವಕಾಶ:ಚಾರ್ಮಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಸೂಚನೆ ನೀಡಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಹರೀಶ್ ಕುಮಾರ್ ಅವರು ಚಾರ್ಮಾಡಿ ಘಾಟ್, ಶಿರಾಡಿ ಘಾಟ್ ರಸ್ತೆ ದುರಸ್ತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಚಾರ್ಮಾಡಿ ಘಾಟ್ನ 24 ಕಿಲೋಮೀಟರ್ ರಸ್ತೆ ಸುಸ್ಥಿತಿಯಲ್ಲಿದೆ. ವಾಹನಸಂಚಾರಕ್ಕೆ ಸುಗಮವಾಗಿದೆ. ವಾಹನ ಸಂಚಾರಕ್ಕೆ ಅನುಮತಿ ನೀಡಲು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಈಗ ಮತ್ತೊಮ್ಮೆ ಸೂಚನೆ ನೀಡಲಾಗುತ್ತದೆ ಎಂದರು.