ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತದ ಬಳಿ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಮುಂದಿನ ಮೂರು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಓದಿ: ನಿಗೂಢವಾಗಿ ಉಳಿದ ಶಿವಮೊಗ್ಗ ಭಯಾನಕ ಶಬ್ದದ ರಹಸ್ಯ: ತಜ್ಞರ ಸಂಶೋಧನೆ ನಂತರವೇ ಸತ್ಯಾಸತ್ಯತೆ ಬಯಲು
ಜಲಪಾತದ ಬಳಿ ಅರಣ್ಯ ಭೂಮಿ ಒತ್ತುವರಿ ತೆರವು ಕೋರಿ ಸ್ಥಳೀಯ ರಾಮಚಂದ್ರ ರಾವ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಶೃಂಗೇರಿ ತಾಲೂಕಿನ ಎರಡದಹಳ್ಳಿ ಗ್ರಾಮದ ಸರ್ವೇ ನಂಬರ್ 173 ಮತ್ತು 199ರಲ್ಲಿ ನಡೆದಿರುವ ಒತ್ತುವರಿಯನ್ನು ತೆರವುಗೊಳಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಮೂರು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಶೃಂಗೇರಿ ತಾಲೂಕಿನ ಎರಡದಹಳ್ಳಿ ಗ್ರಾಮದ ಸರ್ವೇ ನಂ.173 ಮತ್ತು 199ರಲ್ಲಿನ ಜಾಗ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಸಮೀಪದಲ್ಲಿ ಸಿರಿಮನೆ ಜಲಪಾತವಿದ್ದು, ಕೆಲ ಪ್ರಭಾವಿಗಳು ಅಭಿವೃದ್ಧಿ ನೆಪದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.
ಈ ಬಗ್ಗೆ ದೂರು ನೀಡಿದ್ದರೂ ಸರ್ಕಾರಿ ಆಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜಲಪಾತದ ಬಳಿ ಅನಧಿಕೃತ ಕಟ್ಟಡ ನಿರ್ಮಾಣ ನಿಲ್ಲಿಸಲು ಮತ್ತು ಜಲಪಾತದ ಸುತ್ತಲಿನ ಪ್ರದೇಶ ಸಂರಕ್ಷಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.