ಆನೇಕಲ್ (ಬೆಂಗಳೂರು): ಜಿಲ್ಲೆಯ ಆನೇಕಲ್ ಕಾಡಿನಲ್ಲಿ ಗಂಧದ ಮರ ಕಡಿಯಲು ಬಂದಿದ್ದ ಗ್ಯಾಂಗ್ ಮೇಲೆ ಅರಣ್ಯಾಧಿಕಾರಿಗಳ ತಂಡ ದಿಢೀರ್ ದಾಳಿ ಮಾಡಿ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈ ದಾಳಿಯಲ್ಲಿ ಇನ್ನುಳಿದ ಆರು ಮಂದಿ ಪರಾರಿ ಆಗಿದ್ದಾರೆ.
ತಮಿಳುನಾಡಿನ ಬೇರಿಕಿ ಬಳಿ ಸಿಂಗ್ಲಬಲ್ಲಿ ಗೇಟ್ ನಿವಾಸಿ ಪ್ರಸಾದ್ (26) ಸಿಕ್ಕಿಬಿದ್ದ ಆರೋಪಿ. ಸಿಕ್ಕಿಬಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗ, ಆತನು ಇನ್ನುಳಿದ ಆರು ಜನರಾದ ಮುನಿಯಪ್ಪ, ಮುರುಗ, ಭೀಮಪ್ಪ, ಪುಟ್ಟಪ್ಪ, ಬೊಮ್ಮಪ್ಪ ಮತ್ತು ವೆಂಕಟೇಶ್ ಎಂಬುವರ ಹೆಸರನ್ನು ಬಾಯ್ಬಿಟ್ಟಿದ್ದಾನೆ.
ಈ ವೇಳೆ ಆರೋಪಿ ಗಂಧದ ಮರಗಳನ್ನು ಕದ್ದು ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಬಷೀರ್ ಎಂಬುವನಿಗೆ ಮಾರಾಟ ಮಾಡಲಾಗುತ್ತಿತ್ತು. 3-4 ತಿಂಗಳ ಹಿಂದೆ ಗಂಧದ ಬೇಟೆಗೆ ಬಂದಿದ್ದು ಬರಿ ಕೈಲಿ ವಾಪಸಾಗಿದ್ದೆವು ಎಂದು ತಿಳಿಸಿದ್ದಾನೆ. ಅಲ್ಲದೇ ಬಸ್ನಲ್ಲಿ ಕಾಡಿನ ಅಂಚಿಗೆ ಬಂದಿದ್ದೆವು. ಈ ಮೊದಲು ಇನ್ನೊಬ್ಬ ಆರೋಪಿ ಮುನಿಯಪ್ಪ ಎಂಬುವನು ಕಾಡಿನಲ್ಲಿ ಎಲ್ಲೆಲ್ಲಿ ಗಂಧದ ಮರಗಳಿವೆ ಎನ್ನುವುದನ್ನು ತಲಾಷ್ ಮಾಡಿ ಸ್ಕೆಚ್ ರೂಪಿಸುತ್ತಿದ್ದನು ಎಂದು ಆರೋಪಿ ಮಾಹಿತಿ ನೀಡಿರುವ ಕುರಿತು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಒಪ್ಪಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿ ಬಂಧನದ್ವಿಚಕ್ರ ವಾಹನದಲ್ಲಿ ರೈಲ್ವೆ ಸೇತುವೆ ಕೆಳಗಡೆ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ, ಆನೇಕಲ್ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಮಾರುತ್ತಿದ್ದ ಪೃಥ್ವಿ(23) ಬಂಧಿತ ಆರೋಪಿ.