ಬೆಂಗಳೂರು:ರಾಜ್ಯದಲ್ಲಿ ನೂತನ ಶ್ರೀಗಂಧದ ನೀತಿ ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕರಡು ಸಿದ್ಧಪಡಿಸಲು ಅರಣ್ಯ ಸಚಿವ ಉಮೇಶ್ ಕತ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಶ್ರೀಗಂಧದ ಉತ್ಪಾದನೆ ಕಡೆಮೆಯಾಗಿದ್ದು, ಅರಣ್ಯ ಪ್ರದೇಶದಲ್ಲಿಯೂ ಕಡಿಮೆಯಾಗುತ್ತಿದೆ. ಹೀಗಾಗಿ ರೈತರು ಶ್ರೀಗಂಧವನ್ನು ಮುಕ್ತವಾಗಿ ಬೆಳೆಯಲು ಅವಕಾಶ ದೊರೆಯುವಂತೆ ರೈತ ಸ್ನೇಹಿಯಾದ ಶ್ರೀಗಂಧ ನೀತಿ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ರಾಜ್ಯದಲ್ಲಿ ಈಗಿರುವ ನಿಯಮಗಳ ಪ್ರಕಾರ, ರೈತರ ಹೊಲದಲ್ಲಿ ಶ್ರೀಗಂಧ ಬೆಳೆದರೂ, ಅನುಮತಿ ಪಡೆದು ಅದನ್ನು ಕಡಿಯಲು ಕನಿಷ್ಠ 45 ದಿನ ವ್ಯಯವಾಗುತ್ತಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರೈತ ಸ್ನೇಹಿಯಾಗಿ ಹೊಸ ಶ್ರೀಗಂಧ ನೀತಿ ಜಾರಿ ಮಾಡಲು ಅಗತ್ಯ ಕಾನೂನು ತಿದ್ದುಪಡಿಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಚಿವ ಉಮೇಶ್ ಕತ್ತಿ ಸೂಚನೆ ನೀಡಿದ್ದಾರೆ.