ಬೆಂಗಳೂರು: ವ್ಯಾಸಂಗಕ್ಕೋಸ್ಕರ ವಿದೇಶದಿಂದ ಕರ್ನಾಟಕಕ್ಕೆ ಬರುವ ವಿದ್ಯಾರ್ಥಿಗಳು ವೀಸಾ ಅವಧಿ ಮುಗಿದರೂ ವಾಪಸ್ ಆಗದೇ ತಲೆ ಮರೆಸಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಅಪರಾಧ ಚಟುವಟಿಕೆಯಲ್ಲಿಯೂ ತೊಡಗಿಕೊಳ್ಳುತ್ತಿದ್ದಾರೆ. ಸದ್ಯ ಕಳೆದ ಮೂರು ವರ್ಷದಲ್ಲಿ ಈ ರೀತಿ 452 ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದು, ಅದರಲ್ಲಿ 57 ವಿದೇಶಿಗರು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಗೃಹ ಇಲಾಖೆಯಿಂದ ಲಭ್ಯವಾಗಿದೆ.
ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿ ವೀಸಾದಲ್ಲಿ ವಿದೇಶದಿಂದ ಬಂದು ರಾಜ್ಯದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 4,778 ಆಗಿದ್ದು, ಇವರಲ್ಲಿ ಬೆಂಗಳೂರು ನಗರಕ್ಕೆ 1690 ವಿದ್ಯಾರ್ಥಿಗಳು ಬಂದಿದ್ದರೆ, ಮೈಸೂರಿಗೆ 1279 ವಿದ್ಯಾರ್ಥಿಗಳು ಬಂದಿದ್ದಾರೆ. ಉಳಿದವರು ಇತರ ಜಿಲ್ಲೆಗಳಲ್ಲಿ ವಾಸವಿದ್ದಾರೆ. ವೀಸಾ ಅವಧಿ ಮುಗಿದ ನಂತರವೂ ಅನಧಿಕೃತವಾಗಿ 452 ವಿದೇಶಿ ಪ್ರಜೆಗಳು ರಾಜ್ಯದಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿ ವೀಸಾದಲ್ಲಿ ರಾಜ್ಯಕ್ಕೆ ಬಂದಿರುವ ವಿದ್ಯಾರ್ಥಿಗಳಲ್ಲಿ 57 ವಿದ್ಯಾರ್ಥಿಗಳು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇವರ ವಿರುದ್ಧ 45 ಕೇಸ್ಗಳು ದಾಖಲಾಗಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
ಹತ್ತು ಹಲವು ರಾಷ್ಟ್ರಗಳಿಂದ ಭಾರತಕ್ಕೆ ವಿದ್ಯಾರ್ಥಿ ವೀಸಾ ಪಡೆದು ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಕರ್ನಾಟಕಕ್ಕೂ ಸಾಕಷ್ಟು ವಿದ್ಯಾರ್ಥಿಗಳು ಬಂದು ವಿವಿಧ ಜಿಲ್ಲೆಗಳಲ್ಲಿನ ಶೈಕ್ಷಣಿಕ ಸಂಸ್ಥೆಯಲ್ಲಿ ದಾಖಲಾಗುತ್ತಿದ್ದಾರೆ. ಆದರೆ, ಈ ರೀತಿ ದಾಖಲಾದ ವಿದ್ಯಾರ್ಥಿಗಳಲ್ಲಿ ಕೆಲವರು ವೀಸಾ ಅವಧಿ ಮುಗಿದರೂ ತಮ್ಮ ದೇಶಕ್ಕೆ ವಾಪಸ್ ಆಗದೇ ಅಕ್ರಮವಾಗಿ ಇಲ್ಲಿಯೇ ನೆಲೆಯೂರುತ್ತಾರೆ. ತಲೆಮರೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವರು ಅಪರಾಧ ಚಟುವಟಿಕೆಯಲ್ಲಿಯೂ ಭಾಗಿಯಾಗುತ್ತಿದ್ದಾರೆ. ಲಿಬಿಯಾ, ಉಗಾಂಡ, ಸೂಡಾನ್, ಯೆಮನ್, ನೈಜೀರಿಯಾ, ಸೌದಿ ಅರೇಬಿಯಾ, ಕಥಾರ್, ತಾಂಜೇನಿಯಾ, ಕಾಂಗೊ, ಐವರಿ ಕೋಸ್ಟ್, ಬಾಂಗ್ಲಾದೇಶ, ಇರಾನ್, ಘಾನಾ, ಆಫ್ರಿಕಾ, ಕೀನ್ಯಾ, ಇರಾಕ್ ದೇಶಗಳಿಗೆ ಸೇರಿದ ವಿದ್ಯಾರ್ಥಿಗಳು ಅಪರಾಧ ಕೃತ್ಯದಲ್ಲಿ ಭಾಗವಹಿಸಿದ್ದಾರೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.