ಬೆಂಗಳೂರು :ಮಲ್ಲೇಶ್ವರದಲ್ಲಿರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಕ್ಯಾಂಪಸ್ ಅನ್ನು ಸದ್ಯದಲ್ಲೇ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಿ, ಇಲ್ಲಿನ ಪದವಿ ಕಾಲೇಜಿನಲ್ಲಿ ವಿದೇಶಿ ಭಾಷೆಗಳನ್ನು ಕಲಿಯುವ ಸುಸಜ್ಜಿತ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಮಲ್ಲೇಶ್ವರ 13ನೇ ಅಡ್ಡರಸ್ತೆಯಲ್ಲಿರುವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರ ಭವಿಷ್ಯವನ್ನು ಪರಿಗಣಿಸಿ ಬೆಂಗಳೂರು ವಿವಿ ಜತೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳನ್ನು ಕೂಡ ಆರಂಭಿಸಲಾಗಿದೆ ಎಂದರು.
ರಾಜ್ಯದಲ್ಲಿರುವ 430 ಸರ್ಕಾರಿ ಪದವಿ ಕಾಲೇಜುಗಳನ್ನು ಸಮಗ್ರವಾಗಿ ಸುಧಾರಿಸಲು ಸರ್ಕಾರ ಪಣತೊಟ್ಟಿದೆ. ಈ ನಿಟ್ಟಿನಲ್ಲಿ ಈಗಾಗಲೇ ಶಿಕ್ಷಣ ಸಂಸ್ಥೆಗಳಲ್ಲಿ ನೂರಕ್ಕೆ ನೂರರಷ್ಟು ಡಿಜಿಟಲ್ ಕಲಿಕೆ ಮತ್ತು ಸ್ಮಾರ್ಟ್ ತರಗತಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಬಹುಮುಖ ಪ್ರತಿಭಾವಂತರನ್ನಾಗಿ ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಅಡ್ಡದಾರಿ ಹಿಡಿಯಬಾರದು
ಜತೆಗೆ ಸರ್ಕಾರವು ಇನ್ಫೋಸಿಸ್, ಮಹೀಂದ್ರ & ಮಹೀಂದ್ರ, ನಾಸ್ಕಾಂ ಮುಂತಾದ ದೈತ್ಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆಯಾಯ ಕಾಲೇಜಿಗೆ ಬೇಕಾದ ಮೈಕ್ರೋಸೈಟ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳು ಸಾಧನೆ ಮಾಡುವ ಅವಸರದಲ್ಲಿ ಅಡ್ಡದಾರಿ ಹಿಡಿಯಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.