ಬೆಂಗಳೂರು:ಬಾರ್ ಅಂಡ್ ರೆಸ್ಟೋರೆಂಟ್ ವೊಂದರಲ್ಲಿ ಪರವಾನಗಿ ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಮದ್ಯ ಹಾಗೂ ಊಟದ ಜೊತೆಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಕ್ಯಾಮರೂನ್ ದೇಶದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ ಕ್ಯಾಮರೂನ್ ದೇಶದ ಥಾಂಬೆ ಡ್ಯಾನಿಯಲ್ ಅಥೆಮ್ ಬಂಧಿತ ಆರೋಪಿ. ಬಾರ್‌ನಲ್ಲಿ ಡಿಜೆ ಆಗಿ ಕೆಲಸ ಮಾಡುತ್ತಿದ್ದ ಈತನಿಂದ ಸೌಂಡ್ ಸಿಸ್ಟಂ, ಮ್ಯೂಸಿಕ್ ಕಂಟ್ರೋಲರ್, ಸ್ವೈಪಿಂಗ್ ಮಿಷನ್, 1,500 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಅಪರಾ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಮಹಾಲಕ್ಷ್ಮೀ ಲೇ ಔಟ್‌ನ ಇಸ್ಕಾನ್ ದೇವಸ್ಥಾನ ಹತ್ತಿರದ ಆರ್.ಜಿ.ರಾಯಲ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಅಬಕಾರಿ ಪರವಾನಗಿ ನಿಯಮಾವಳಿಗಳನ್ನು ಉಲ್ಲಂಘಿಸಿ ಗ್ರಾಹಕರಿಗೆ ಮಾದಕ ವಸ್ತುಗಳನ್ನು ನೀಡಿ ಹಣ ಸಂಪಾದನೆ ಮಾಡಲಾಗುತ್ತಿತ್ತು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಬಾರ್ ಮಾಲೀಕ ರವೀಶ್ ಗೌಡ, ಜನರಲ್ ಮ್ಯಾನೇಜರ್ ವೆಂಕಟೇಶ್, ಮ್ಯಾನೇಜರ್ ಸೆಬಾಸ್ಟಿಯನ್, ಇವೆಂಟ್ ಮ್ಯಾನೇಜರ್ ಸಲೀಂ ಎಂಬುವವರು ತಲೆಮರೆಸಿಕೊಂಡಿದ್ದು, ಹುಡುಕಾಟ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.