ಬೆಂಗಳೂರು:ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಕುಟುಂಬದವರ ಹೆಸರು ಹೇಳಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಆಸಾಮಿಯನ್ನ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾವೇರಿ ಮೂಲದ ಶಿವಕುಮಾರ್ ಹೊಸಳ್ಳಿ ಬಂಧಿತ ಆರೋಪಿ.
ಈತ ಉತ್ತರ ಕರ್ನಾಟಕ ಮೂಲದ ಯುವಕರಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ನನಗೆ ಮುಖ್ಯಮಂತ್ರಿ ಹಾಗೂ ಅವರ ಕುಟುಂಬಸ್ಥರು ಬಹಳ ಆತ್ಮೀಯರು ಹೀಗಾಗಿ ವಿವಿಧ ಇಲಾಖೆಗಳಲ್ಲಿ ಕೆಲಸ ಖಾಲಿ ಇದೆ. ನಿಮಗೆ ಕೆಲಸ ಕೊಡಿಸಬೇಕಾದರೆ ಇಂತಿಷ್ಟು ಹಣ ನೀಡಬೇಕೆಂದು ಕೆಲಸ ಕೊಡಿಸೊ ನೆಪದಲ್ಲಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡುತ್ತಿದ್ದ.
ಇಷ್ಟು ಮಾತ್ರವಲ್ಲದೇ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಕೆಲಸವನ್ನ ಗುತ್ತಿಗೆ ಮಾಡಿಕೊಡುವುದಾಗಿ ಪಿಡಬ್ಲ್ಯೂಡಿ ಸೇರಿ ಹಲವು ಇಲಾಖೆ ಗುತ್ತಿಗೆದಾರರಿಗೆ ಕೆಲಸದ ಬಿಲ್ ಕ್ಲಿಯರ್ ಮಾಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ. ಸದ್ಯ ಈ ವಿಚಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ನೊಂದವರು ದೂರು ನೀಡಿದ್ದರು.
ಇದನ್ನ ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವರು ಸಿಸಿಬಿ ತನಿಖೆಗೆ ಜವಾಬ್ದಾರಿ ಹೊಣೆ ನೀಡಿದ್ದರು. ಹತ್ತಾರು ಜನರಿಂದ ಲಕ್ಷಾಂತರ ಹಣ ಪಡೆದಿದ್ದ ಆರೋಪಿಯನ್ನ ಸದ್ಯ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಆರೋಪಿ ಬಹಳಷ್ಟು ಜನರಿಗೆ ಮೊಸ ಮಾಡಿದ್ದು ಬಯಲಾಗಿದ್ದು, ತನಿಖೆ ಮುಂದುವರೆದಿದೆ.