ಬೆಂಗಳೂರು :ಕೋವಿಡ್ ನೆಪವೊಡ್ಡಿ ಹಣವಿಲ್ಲ ಅನ್ನೋ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಮೀಸಲಿಟ್ಟ 71 ಸಾವಿರ ಕೋಟಿ ರೂ. ಏನಾಯ್ತು? ಹಣ ಹೊಡೆದಿದ್ದಾರಾ? ಎಂದು ಜೆಡಿಎಸ್ ಸದಸ್ಯ ರಮೇಶ್ ಗೌಡ ಪ್ರಶ್ನಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಅವ್ಯವಹಾರ ಜಗಜ್ಜಾಹೀರಾಗಿದೆ. ಬಜೆಟ್ನಲ್ಲಿ ಈ ಹಣ ಬಳಕೆಯ ಯಾವುದೇ ಮಾಹಿತಿ ನೀಡಿಲ್ಲ. ಈಗ ಮತ್ತೆ ಹಣ ಮೀಸಲಿಟ್ಟಿದೆ.
ಯಾವುದಕ್ಕೆ ಬಳಸಿಕೊಳ್ಳುತ್ತಿದ್ದೇವೆ ಎಂದು ಸೂಚಿಸಿಲ್ಲ. ಲೋಕಾಯುಕ್ತ ಬಲ ತುಂಬುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದ ವಿಚಾರವನ್ನು ಬಿಜೆಪಿ ಮರೆತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಲೂಟಿ ತಡೆಯಲು ಲೋಕಾಯುಕ್ತಕ್ಕೆ ಜೀವ ತುಂಬಬೇಕಿದೆ. ಅಧಿಕಾರಿಗಳ ಭ್ರಷ್ಟಾಚಾರ ಮಿತಿ ಮೀರಿದೆ. ಒಬ್ಬ ಸಮರ್ಥ ನ್ಯಾಯಮೂರ್ತಿಗಳನ್ನು ಲೋಕಾಯುಕ್ತರನ್ನಾಗಿ ನೇಮಿಸಿ ಎಂದು ಸಲಹೆ ಇತ್ತರು.
ಕೋವಿಡ್-19 ವಾರಿಯರ್ಗಳಿಗೆ ಸರ್ಕಾರ ಗೌರವ ನೀಡಿಲ್ಲ. ಮೃತ ಕೊರೊನಾ ವಾರಿಯರ್ಗಳಿಗೆ 30 ಲಕ್ಷ ರೂ. ಪರಿಹಾರ ಕೊಡುತ್ತೇವೆ ಎಂದಿದ್ದರು. ಯಾರಿಗೆ ಸಿಕ್ಕಿದೆ? ಆ್ಯಂಬುಲೆನ್ಸ್ಗೆ ಪರ್ಯಾಯವಾಗಿ 500 ಟೆಂಪೊ ಟ್ರಾವೆಲರ್ ಬಾಡಿಗೆಗೆ ಪಡೆದರು. ಅವರಿಗೆ ಹಣ ನೀಡಿಲ್ಲ. ಅವರು ಪ್ರತಿಭಟನೆಗೆ ಇಳಿದಿದ್ದಾರೆ ಎಂದರು.
ಭ್ರಷ್ಟಾಚಾರ ಮಾಡುವವರು ಯಾರೇ ಇರಲಿ, ತಾವು ಆ ಸ್ಥಾನದಲ್ಲಿ ಕುಳಿತವರು ಒಂದಿಷ್ಟು ಆದೇಶ ಹೊರಡಿಸಬೇಕು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶ ಮಾಡಿ, ಬಜೆಟ್ ಮೇಲಿನ ಚರ್ಚೆ ಸಂದರ್ಭ ಕೋವಿಡ್ ವಿಚಾರವಾಗಿ ನಡೆದ ಚರ್ಚೆಯನ್ನೇ ಮಾಡುವ ಬದಲು, ಬಜೆಟ್ ಮೇಲೆ ಮಾತನಾಡಿ ಎಂದರು.