ಬೆಂಗಳೂರು: ಯಾವುದೇ ಹೋರಾಟಕ್ಕೆ ಗೋಕಾಕ್ ಚಳವಳಿ ನಮಗೆ ಮಾರ್ಗದರ್ಶನ ಆಗಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕರೆ ನೀಡಿದರು. ಪರಿಷ್ಕೃತ ಪಠ್ಯ ವಿರುದ್ಧದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಕಾರ್ಯಕ್ರಮ ಹಾಕಿದರೆ ಅದನ್ನು ಹೇಗೆ ಅಂತ್ಯ ಗೊಳಿಸಬೇಕು?. ಅದನ್ನು ಹೇಗೆ ಸಾಧಿಸಬೇಕು ಅನ್ನೋದರ ಬಗ್ಗೆ ಗೋಕಾಕ್ ಚಳವಳಿ ನಮಗೆ ಮಾರ್ಗದರ್ಶನ. ಆವಾಗ ರಾಜಕುಮಾರ್ ಇದ್ದರು. ಇಡೀ ರಾಜ್ಯದ ಜನತೆ ಅದರಲ್ಲಿ ಪಾಲ್ಗೊಂಡಿದ್ದರು. ಅದೊಂದು ದೊಡ್ಡ ಹೋರಾಟ. ನಾನು ಶಕ್ತಿ ಮೀರಿ ಏನು ಬೆಂಬಲ ಕೊಡಬಹುದೋ ಅದನ್ನು ಕೊಡುತ್ತೇನೆ ಎಂದು ತಿಳಿಸಿದರು.
ಬಸವ ಕೃಪಾ ಪಾಲನೆ ಮಾಡಿ: ಇದೇ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ನಾನು ಜೆಡಿಎಸ್ ನವನಲ್ಲ, ಸಾಬ್ರಲ್ಲ. ನಾನು ಕುವೆಂಪು ಅಭಿಮಾನಿ, ಅದಕ್ಕೆ ಬಂದಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿಗೆ ಕೇಶವ ಕೃಪಾದಲ್ಲಿ ಜಾಸ್ತಿ ದಿವಸ ಇರೋದಕ್ಕೆ ಆಗುವುದಿಲ್ಲ. ನೀವು ಬಸವ ಕೃಪಾದವರು. ಬಸವ ಕೃಪಾವನ್ನು ಪಾಲನೆ ಮಾಡಿ. ವೋಟಿಗೆ ರಾಜಕಾರಣ ಮಾಡಬೇಡಿ. ಶಿವಕುಮಾರ್ ಹೊಸ ಪಠ್ಯಪುಸ್ತಕ ಹರಿದು ಹಾಕಿ ಹೊಸ ಸರ್ಕಾರ ಬರುತ್ತೆ ಎಂದು ಹೇಳಿದರು. ಹೌದು, ಮುಂದೆ ಈ ನಾಡನ್ನು ಆಳುವವರು ಕೆಂಪೇಗೌಡರ ವಂಶಸ್ಥರು ಎಂದು ತಿಳಿಸಿದರು.