ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಆಡಳಿತ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸುವ ಗೊರಕೆ ಸಾಕು, ಪೊರಕೆ ಬೇಕು ಅಭಿಯಾನವನ್ನು ಭಾನುವಾರ ಬೆಳಗ್ಗೆ 10.30ಕ್ಕೆ ಆರಂಭಿಸಲಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಹಾಗೂ ಸರ್ಕಾರ ಸೇರಿಕೊಂಡು ಜನರನ್ನು ಹಗಲು ದರೋಡೆ ಮಾಡುತ್ತಿವೆ. ವಿದ್ಯುತ್ ಬಿಲ್, ಪಾರ್ಕಿಂಗ್ ಶುಲ್ಕ, ಕಸದ ಸೆಸ್, ಆಸ್ತಿ ತೆರಿಗೆ, ನೀರಿನ ಬಿಲ್ ಹೀಗೆ ಒಂದೊಂದೇ ಮೂಲ ಸೌಕರ್ಯಗಳನ್ನು ದುಬಾರಿ ಮಾಡಿ ಜನಸಾಮಾನ್ಯರು ಬದುಕಲು ಆಗದಂತಹ ವಾತಾವರಣ ನಿರ್ಮಾಣ ಮಾಡುತ್ತಿವೆ. ಈ ಎಲ್ಲಾ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯದ ಜೊತೆಗೆ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ದೆಹಲಿ ಸರ್ಕಾರ ಉಚಿತ ವಿದ್ಯುತ್, ಅಂತಾರಾಷ್ಟ್ರೀಯ ಗುಣಮಟ್ಟದ ಸರ್ಕಾರಿ ಶಾಲೆಗಳು, ಉಚಿತ ಆರೋಗ್ಯ ವ್ಯವಸ್ಥೆ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಹೀಗೆ ಜನಸಾಮಾನ್ಯರ ಪರವಾಗಿ ಕೆಲಸ ಮಾಡಿ ದೆಹಲಿ ಮಾದರಿ ಹುಟ್ಟುಹಾಕಿದೆ. ಈ ಯಶಸ್ವಿ ಮಾದರಿ ಬಗ್ಗೆ ಅಭಿಯಾನದ ಮೂಲಕ ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.