ಬೆಂಗಳೂರು :ರಾಜ್ಯದ ಎಲ್ಲ ಕೃಷಿ ವಿಜ್ಞಾನ ಕೇಂದ್ರಗಳು, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ 114.53 ಲಕ್ಷ ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ ಲಸಿಕೆ ನೀಡಲಾಗುತ್ತಿದೆ. 6,303 ಸಿಬ್ಬಂದಿಗಳನ್ನು ಈ ಲಸಿಕಾ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ. ರಾಜ್ಯದ ಎಲ್ಲ ರೈತರು ಮತ್ತು ಪಶುಪಾಲಕರು ಜಾನುವಾರು ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿ ಇಂದಿನಿಂದ ನವೆಂಬರ್ 15ರ ವರೆಗೆ ನಡೆಯುವ ಮೊದಲನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರವನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಕರ್ತವ್ಯ ಲೋಪ ಆಗದಂತೆ ಎಚ್ಚರವಹಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೊನಾ ನೆಪ ಒಡ್ಡಿ ಅಧಿಕಾರಿಗಳು ಕರ್ತವ್ಯದಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿರುವುದು ತಿಳಿದು ಬಂದಿದೆ. ಜಾನುವಾರು ಆರೋಗ್ಯದ ದೃಷ್ಟಿಯಿಂದ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಅತ್ಯಂತ ಮಹತ್ವದ ಲಸಿಕಾ ಕಾರ್ಯಕ್ರಮವಾಗಿದ್ದು, ಯಾವುದೇ ಜಿಲ್ಲೆಗಳಲ್ಲಿ ಇದಕ್ಕೆ ಹಿನ್ನಡೆಯಾದಲ್ಲಿ, ರೈತರ ಹಿತ ಕಾಪಾಡದ ಆಯಾ ಜಿಲ್ಲೆಯ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೋಜನೆಯ ಉದ್ದೇಶಗಳು : ಲಸಿಕೆ ಹಾಕುವ ಮೂಲಕ 2025 ಕ್ಕೆ ಕಾಲುಬಾಯಿ ರೋಗವನ್ನು ನಿಯಂತ್ರಿಸುವುದು ಮತ್ತು 2030ರ ವೇಳೆಗೆ ಕಾಲುಬಾಯಿ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು. ಶೇ.100 ರಷ್ಟು ದನ, ಎಮ್ಮೆ, ಹಂದಿ, ಕುರಿ ಹಾಗೂ ಮೇಕೆಗಳಲ್ಲಿ ಕಾಲುಬಾಯಿ ರೋಗಕ್ಕೆ 2 ಬಾರಿ ಕಡ್ಡಾಯವಾಗಿ ಲಸಿಕೆ ಹಾಕಲಾಗುತ್ತದೆ. 2020-21 ನೇ ಸಾಲಿನಲ್ಲಿ 4 ನೇ ಸುತ್ತಿನ ರಾಷ್ಟ್ರೀಯ ಸ್ಟೀರಿಂಗ್ ಸಮಿತಿ ಸಭೆಯ ನಡಾವಳಿಯಂತೆ ಮೊದಲನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮದಲ್ಲಿ ಶೇ.100 ರಷ್ಟು ದನ ಮತ್ತು ಎಮ್ಮೆಗಳಿಗೆ ಮಾತ್ರ ಲಸಿಕೆ ನೀಡಲಾಗಿದೆ. ರೈತರಿಗೆ ಆರ್ಥಿಕ ಸಂಕಷ್ಟ ತಂದೊಡ್ಡುವ ಕಾಲುಬಾಯಿ ರೋಗವನ್ನು ನಿಯಂತ್ರಿಸಲು ಪ್ರತಿ 6 ತಿಂಗಳಿಗೊಮ್ಮೆ ಈ ಲಸಿಕೆ ಹಾಕಿಸುವುದರ ಮೂಲಕ ಜಾನುವಾರುಗಳ ಆರೋಗ್ಯ ಕಾಪಾಡುವುದು ಮತ್ತು ನಿಯಂತ್ರಣಕ್ಕೆ ಒತ್ತು ನೀಡಲಾಗುವುದು ಎಂದಿದ್ದಾರೆ.
ಕಾಲು ಬಾಯಿ ಜ್ವರ ಲಸಿಕೆಯ ಭಾಗವಾಗಿ 4 ರಿಂದ 5 ತಿಂಗಳ ಕರುಗಳಿಗೆ ಕಡ್ಡಾಯವಾಗಿ ಬೂಸ್ಟರ್ ಡೋಸ್ ಹಾಕುವುದು. ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿ ಏಕರೂಪದ ನಿಗದಿತ ಸಮಯಾವಧಿಯಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಜಾನುವಾರುಗಳಿಗೆ ಲಸಿಕೆ ಹಾಕುವ ಒಂದು ತಿಂಗಳು ಮೊದಲು ಜಂತುನಾಶಕ ನೀಡಲಾಗುತ್ತದೆ. ಲಸಿಕೆ ಹಾಕುವ ಜಾನುವಾರುಗಳಿಗೆ ಕಡ್ಡಾಯವಾಗಿ 12 ಸಂಖ್ಯೆವುಳ್ಳ ವಿಶಿಷ್ಟ ಟ್ಯಾಗ್ ಅಳವಡಿಸುವುದು. 2011-12 ರಿಂದ ಸತತ 16 ಸುತ್ತುಗಳ ಲಸಿಕಾ ಕಾರ್ಯಕ್ರಮವನ್ನು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳ ಸಹಯೋಗದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಸುಮಾರು 114.53 ಲಕ್ಷ ದನ, ಎಮ್ಮೆಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಸದರಿ ಯೋಜನೆ ಅಡಿ ಮೂರು ತಿಂಗಳ ಒಳಗಿರುವ ಕರುಗಳು, ಗರ್ಭಧರಿಸಿದ ಹಾಗೂ ಅನಾರೋಗ್ಯ ಪೀಡಿತ ಜಾನುವಾರುಗಳನ್ನು ಹೊರತುಪಡಿಸಿ ಎಲ್ಲ ರಾಸುಗಳಿಗೆ ಲಸಿಕೆ ಹಾಕಲಾಗುತ್ತದೆ. ಈ ಲಸಿಕೆಗೆ ಒಳಪಡದ ಜಾನುವಾರುಗಳನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ನಡೆಸುವ ಕೊಂಬಿಂಗ್ ಸುತ್ತಿನಲ್ಲಿ ಲಸಿಕೆಗೆ ಒಳಪಡಿಸಲಾಗುತ್ತದೆ. ಜಾನುವಾರಗಳ ‘ಸಮೂಹ ರೋಗ ನಿರೋಧಕತೆ’ ಹೆಚ್ಚಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ಲಸಿಕೆ ಹಾಕಿಸುವುದರಿಂದ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿವೃದ್ಧಿಯಾಗಿ ರೋಗವನ್ನು ಹೆಚ್ಚು ಪ್ರಮಾಣದಲ್ಲಿ ನಿಯಂತ್ರಿಸಬಹುದಾಗಿದೆ. ರಾಜ್ಯವನ್ನು ರೋಗಮುಕ್ತ ವಲಯವನ್ನಾಗಿಸುವಲ್ಲಿ ಮತ್ತು ಹೈನುಗಾರಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುವಲ್ಲಿ ಲಸಿಕಾ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ. ರೈತ ಬಾಂಧವರು ಹಾಗೂ ಜಾನುವಾರು ಮಾಲೀಕರು ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಮತ್ತೊಮ್ಮೆ ತಮ್ಮ ಗ್ರಾಮಗಳಲ್ಲಿ ನಿಗದಿಯಾದ ದಿನಾಂಕದಂದು ಲಸಿಕೆ ಮಾಡಿಸಬೇಕು. ಪಶುಪಾಲನಾ ಇಲಾಖೆಯ ಜಾನುವಾರುಗಳ ಆರೋಗ್ಯ ಸಂರಕ್ಷಣೆಯ ಅತೀ ಮುಖ್ಯ ಕಾರ್ಯಕ್ರಮದ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಗಳಲ್ಲಿ, ಅಲ್ಲದೇ ನಗರಸಭೆ ಮತ್ತು ಪಟ್ಟಣ ಸಭೆ ಹಾಗೂ ಮಹಾನಗರ ಪಾಲಿಕೆಯಲ್ಲಿ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರಿಗೆ ಲಸಿಕಾ ಅಭಿಯಾನ ಯಶಸ್ವಿಯಾಗಿ ಕಾರ್ಯಗತಗೊಳ್ಳಲು ಸಂಪೂರ್ಣ ಸಹಕಾರ ನೀಡುವಂತೆ ಸಚಿವರು ತಿಳಿಸಿದ್ದಾರೆ.