ಬೆಂಗಳೂರು: ಈ ವರ್ಷದ ಯುಗಾದಿಯನ್ನು ಸಂಭ್ರಮದಿಂದ ಆಚರಿಸುವ ಉತ್ಸಾಹದಲ್ಲಿದ್ದ ಮಹಾನಗರದ ನಾಗರಿಕರಿಗೆ ಬೆಲೆ ಏರಿಕೆ ಬಿಸಿ ಸರಿಯಾಗಿಯೇ ತಟ್ಟಿದೆ. ಹಬ್ಬವನ್ನು ಸಾಂಪ್ರದಾಯಿಕವಾಗಿ ಹಾಗೂ ಅದ್ಧೂರಿಯಾಗಿ ಆಚರಿಸುವ ಆಶಯದೊಂದಿಗೆ ಮಾರುಕಟ್ಟೆಗೆ ಖರೀದಿಗೆ ತೆರಳಿದ ಜನ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ.
ಬೆಂಗಳೂರಿನ ವಿವಿಧ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಹಾಗೂ ತರಕಾರಿಗಳ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಈ ಬೆಲೆ ಏರಿಕೆ ಯುಗಾದಿ ಹಬ್ಬದ ಆಚರಣೆಯನ್ನೇ ಕಾರಣವಾಗಿಸಿಕೊಂಡಿರುವುದು ಪ್ರಮುಖವಾಗಿದೆ. ಒಂದೆಡೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಹಬ್ಬದ ಸಂದರ್ಭದಲ್ಲಿ ಹೂವಿನ ಬೆಲೆ ನಿತ್ಯಕ್ಕಿಂತ ದುಪ್ಪಟ್ಟಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹೂವಿನ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯ ಕೂಡ ಕಳೆದ ಕೆಲ ದಿನಗಳಿಂದ ಬೆಲೆ ಅಧಿಕವಾಗುವಂತೆ ಮಾಡಿದ್ದು, ಕಳೆದ ಎರಡು ಮೂರು ದಿನಗಳಿಂದ ಹೂವಿನ ಬೆಲೆಯಲ್ಲಿ ಭಾರಿ ಹೆಚ್ಚಳ ಉಂಟಾಗಿದೆ.
ಇದನ್ನೂ ಓದಿ :ಮರಳಿ ಬಂತು ಯುಗಾದಿ! ಶೋಭಕೃತ್ ಸಂವತ್ಸರ ಸಂಭ್ರಮ
ಹಬ್ಬದ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವುದು ಅನಿವಾರ್ಯ. ಈ ವಿಚಾರವನ್ನು ಮನಗಂಡ ಹೂವಿನ ವ್ಯಾಪಾರಿಗಳು ಸಹಜವಾಗಿಯೇ ಬೆಲೆ ಏರಿಕೆ ಮಾಡಿದ್ದಾರೆ. ಹೀಗಾಗಿ, ಮಾರುಕಟ್ಟೆಗೆ ಆಗಮಿಸಿದ ಸಾಕಷ್ಟು ಮಂದಿ ಬೆಲೆ ಏರಿಕೆಯ ಮಾಹಿತಿ ತಿಳಿದು ಬೇಸರಗೊಂಡು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಖರೀದಿಸಿ ತೆರಳುತ್ತಿದ್ದಾರೆ. ಇದರಿಂದಾಗಿ ಭಾರಿ ಸಂಖ್ಯೆಯಲ್ಲಿ ಗ್ರಾಹಕರನ್ನು ನಿರೀಕ್ಷಿಸಿದ್ದ ಹೂವಿನ ವ್ಯಾಪಾರಿಗಳಿಗೆ ತುಂಬಾ ನಿರಾಶೆ ಉಂಟಾಗಿದ್ದು ರೈತರಿಂದ ಕೊಂಡು ತಂದಿರುವ ಹೂವುಗಳು ಸಾಯಂಕಾಲದ ಹೊತ್ತಿಗೂ ಖಾಲಿಯಾಗದಿದ್ದರೆ ಹೇಗೆ? ಎಂದು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.