ಬೆಂಗಳೂರು: ನಗರದ ವಿವಿಧೆಡೆ ಕಾಂಗ್ರೆಸ್ ನಾಯಕರು ಇಂದು ಬಿಜೆಪಿ ವಿರುದ್ಧ ಕಿವಿ ಮೇಲೆ ಹೂ ಅಭಿಯಾನ ನಡೆಸಿದ್ದಾರೆ. ನಗರದ ಹಲವೆಡೆ ಬಿಜೆಪಿ ಸರ್ಕಾರದ ಸಾಧನೆ ವಿವರಿಸುವ ಪೋಸ್ಟರ್ಗಳನ್ನು ಅಳವಡಿಸಲಾಗಿದೆ. ಕೆಲವೆಡೆ ಪೇಂಟಿಂಗ್ ಕೂಡ ಮಾಡಿಸಲಾಗಿದೆ. ಇಂತಹ ಪೋಸ್ಟರ್ ಹಾಗೂ ಸ್ಥಳವನ್ನು ಹುಡುಕಿ ಗುರಿಯಾಗಿಸಿದ ಕಾಂಗ್ರೆಸ್ ಮುಖಂಡರು ಅದರ ಮೇಲೆ ಕಿವಿ ಮೇಲೆ ಹೂವಿರುವ ವ್ಯಕ್ತಿಯ ಮುಖದ ಚಿತ್ರವನ್ನು ಅಂಟಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಕಾರ್ಯ ಮಾಡುತ್ತಿದೆ. ಬಜೆಟ್ ಹೆಸರಿನಲ್ಲಿ ಕೇವಲ ಆಶಾಗೋಪುರ ಕಟ್ಟುವ ಕಾರ್ಯ ಮಾಡುತ್ತಿದೆ ಎಂದು ಜರಿದಿದ್ದಾರೆ.
ನಿನ್ನೆ ಬಜೆಟ್ ಮಂಡನೆ ಸಂದರ್ಭದಲ್ಲಿ ಉಬಯ ಸದನಗಳಲ್ಲಿಯೂ ಕಾಂಗ್ರೆಸ್ ನಾಯಕರು ಕಿವಿ ಮೇಲೆ ಚೆಂಡು ಹೂ ಧರಿಸಿ ಪಾಲ್ಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧಾನಸೌಧ ಹೊರಗೂ ಧರಿಸಿಕೊಂಡೇ ಆಗಮಿಸಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ನಿನ್ನೆ ಸದನದಲ್ಲಿ ಹೂ ಮುಡಿದು ಹೋರಾಟದ ಹೊಸ ಸ್ವರೂಪ ತೋರಿಸಿದ್ದ ಕಾಂಗ್ರೆಸ್ ಇಂದು ಬೆಳಗ್ಗಿನಿಂದ ಬೇರೊಂದು ವಿಧದ ಅಭಿಯಾನಕ್ಕೆ ಚಾಲನೆ ನೀಡಿತು. ಇಂದು ಬೆಳಗ್ಗೆ ಕಿವಿ ಮೇಲೆ ಹೂವ ಎಂಬ ಪೋಸ್ಟರ್ ಅಭಿಯಾನ ಶುರುಮಾಡಿದ್ದು, ನಗರದ ವಿವಿಧೆಡೆ ಬಿಜೆಪಿ ಸಾಧನೆ ವಿವರಿಸುವ ಪೋಸ್ಟರ್ಗಳ ಮೇಲೆ ಈ ಕಿವಿಮೇಲೆ ಹೂವ ಚಿತ್ರ ರಾರಾಜಿಸಿತು.
ರಾತ್ರಿಯಿಡೀ ಸಂಚರಿಸಿ ತಮ್ಮ ಕೈಚಳಕ ತೋರಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಬೆಳಗಾಗುವುದರೊಳಗೆ ನಗರದ ವಿವಿಧೆಡೆ ಓಡಾಡಿ ಕಿವಿ ಮೇಲೆ ಹೂವ ಚಿತ್ರ ಅಂಟಿಸಿದ್ದರು. ಬೆಳಗ್ಗಿನಿಂದ ಇನ್ನೂ ಕೆಲವಡೆ ಯುವ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಚಿತ್ರ ಅಂಟಿಸುವ ಕಾರ್ಯ ಮುಂದುವರಿಸಿದ್ದಾರೆ. ಇಂದು ಬೆಳಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ನಗರದ ವಿವಿಧೆಡೆ ಕಿವಿ ಮೇಲೆ ಹೂವು ಇರುವ ಚಿತ್ರ ಅಂಟಿಸುವ ಕಾರ್ಯ ಮಾಡಿದ್ದಾರೆ. ಮಧ್ಯಾಹ್ನದ ನಂತರ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನಗರದಲ್ಲಿ ಸಾರ್ವಜನಿಕರಿಗೆ ಹೂವನ್ನು ನೀಡುವ ಮೂಲಕ ಕಿವಿ ಮೇಲೆ ಹೂವು ಅಭಿಯಾನ ಆಚರಿಸಿದ್ದಾರೆ.