ಕರ್ನಾಟಕ

karnataka

ETV Bharat / state

ಪ್ರವಾಹ ಪರಿಸ್ಥಿತಿ: ಕೂಡಲೇ ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ - ಪ್ರವಾಹ ಸಂತ್ರಸ್ತರ ರಕ್ಷಣಾ ಕಾರ್ಯ

ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಬಿ.ಎಸ್​. ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಿದ್ರು. ಸಂವಾದದಲ್ಲಿ ಅಧಿಕಾರಿಗಳಿಗೆ ಪ್ರವಾಹ ಸಂತ್ರಸ್ತರ ರಕ್ಷಣಾ ಕಾರ್ಯ ಚುರುಕುಗೊಳಿಸಿ, ಹೆಚ್ಚುವರಿ ನೆರವು ಬೇಕಾದಲ್ಲಿ ಕೂಡಲೇ ಒದಗಿಸಲಾಗುವುದು ಎಂದು ಅಭಯ ನೀಡಿದ್ದಾರೆ.

ಸಿಎಂ ಬಿ.ಎಸ್​. ಯಡಿಯೂರಪ್ಪ ವಿಡಿಯೋ ಸಂವಾದ

By

Published : Oct 23, 2019, 5:32 PM IST

ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಉಂಟಾದ ಹಿನ್ನೆಲೆ ಅಧಿಕಾರಿಗಳು ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಅವರು, ದುರಾದೃಷ್ಟವಶಾತ್ ಪ್ರವಾಹದಿಂದಾಗಿ 13 ಜನರು ಮೃತಪಟ್ಟಿದ್ದಾರೆ. ಸುಮಾರು 10,038 ಮನೆಗಳಿಗೆ ಹಾನಿಯಾಗಿದೆ. ಮೃತರ ಕುಟುಂಬಗಳಿಗೆ ಹಾಗೂ ಹಾನಿಗೊಳಗಾದ ಮನೆಗಳಿಗೆ ಕೂಡಲೇ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಪ್ರಸ್ತುತ ಪ್ರವಾಹ ಸಂತ್ರಸ್ತರ ರಕ್ಷಣಾ ಕಾರ್ಯ ಚುರುಕುಗೊಳಿಸಿ. ಹೆಚ್ಚುವರಿ ನೆರವು ಬೇಕಾದಲ್ಲಿ ಕೂಡಲೇ ಒದಗಿಸಲಾಗುವುದು. ಈಗಾಗಲೇ ಎನ್‍ಡಿಆರ್‍ಎಫ್‍ನ ಆರು ತಂಡಗಳು ಹಾಗೂ ರಾಯಚೂರಿನಲ್ಲಿ ಸೇನೆಯ ತಂಡವೂ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಸಂತ್ರಸ್ತರಿಗಾಗಿ 28 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲಸೌಲಭ್ಯ, ಔಷಧಿ, ವೈದ್ಯಕೀಯ ನೆರವು ಇತ್ಯಾದಿಗಳನ್ನು ಒದಗಿಸಬೇಕು. ಹಿಂದೆ ಬಂದಿರುವ ದೂರುಗಳನ್ನು ಗಮನದಲ್ಲಿರಿಸಿಕೊಂಡು ಅವುಗಳನ್ನು ಸರಿಪಡಿಸಿ, ವ್ಯವಸ್ಥಿತವಾಗಿ ಸೌಲಭ್ಯಗಳನ್ನು ಕಲ್ಪಿಸಬೇಕು. ಇದಕ್ಕಾಗಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಪ್ರತಿ ಪರಿಹಾರ ಕೇಂದ್ರಕ್ಕೆ ನಿಯೋಜಿಸಬೇಕು ಎಂದು ಬಿಎಸ್​​​ವೈ ಆದೇಶಿಸಿದರು.

ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಒಟ್ಟು 1027.54 ಕೋಟಿ ರೂ. ಲಭ್ಯವಿದ್ದು, ಪರಿಹಾರ ಕಾರ್ಯಕ್ಕೆ ಅನುದಾನದ ಕೊರತೆ ಇಲ್ಲ. ಹೆಚ್ಚುವರಿ ಅನುದಾನ ಅಗತ್ಯವಿದ್ದಲ್ಲಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಹೇಳಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಧಿಕಾರಿಗಳು ದೀಪಾವಳಿ ರಜೆಯ ನೆಪ ಹೇಳಿ ಕರ್ತವ್ಯದಿಂದ ವಿಮುಖರಾಗದೆ, ಜನರ ಸಂಕಷ್ಟಗಳಿಗೆ ಸ್ಪಂದಿಸುವಂತೆ ನಿರ್ದೇಶನ ನೀಡಿದ್ರು.

ABOUT THE AUTHOR

...view details