ಬೆಂಗಳೂರು:ರಾಜ್ಯದಲ್ಲಿ ಸುರಿದಿರುವ ವ್ಯಾಪಕ ಮಳೆಯಿಂದಾಗಿ ಸಂಭವಿಸಿದ ನೆರೆ ಹಾನಿ ವೀಕ್ಷಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ತೆರಳುತ್ತಿದ್ದು, ಐದು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ನಾಳೆ ಬೆಳಗ್ಗೆ 9 ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸಲಿರುವ ಸಿಎಂ, ಬೆಳಗಾವಿಯ ಸಾಮ್ರಾ ವಿಮಾನ ನಿಲ್ದಾಣಕ್ಕೆ 10:15 ಕ್ಕೆ ತಲುಪಲಿದ್ದಾರೆ. 10:30 ಕ್ಕೆ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಸಚಿವರು ಶಾಸಕರು ಸಂಸದರು ಮತ್ತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಳೆ ಹಾನಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ.
11.15 ಕ್ಕೆ ಸಾಮ್ರಾ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಲಿದ್ದಾರೆ. ಮಧ್ಯಾಹ್ನ 12:30 ಕ್ಕೆ ಆಲಮಟ್ಟಿ ಅಣೆಕಟ್ಟು ಆವರಣದ ಹೆಲಿಪ್ಯಾಡ್ ತಲುಪಲಿರುವ ಸಿಎಂ, ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಸಚಿವರು, ಶಾಸಕರು, ಸಂಸದರು ಮತ್ತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಳೆ ಹಾನಿಗೆ ಸಂಬಂಧಿಸಿದಂತೆ ಆಲಮಟ್ಟಿ ಅತಿಥಿಗೃಹದ ಸಭಾಂಗಣದಲ್ಲಿ ಚರ್ಚೆ ನಡೆಸಲಿದ್ದಾರೆ.
2:30 ಕ್ಕೆ ಆಲಮಟ್ಟಿ ಅಣೆಕಟ್ಟೆ ಆವರಣದ ಹೆಲಿಪ್ಯಾಡ್ ನಿಂದ ಪ್ರಯಾಣ ಬೆಳೆಸಲಿರುವ ಸಿಎಂ, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ನಂತರ 3.30ಕ್ಕೆ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದು, 3.45 ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 5 ಗಂಟೆಗೆ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ.
ಕೊರೊನಾ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಸಂಸದರು, ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.