ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ಮತ್ತೆ ನೆರೆ ಭೀತಿ.. ಕಳೆದ ಬಾರಿ ನೆರೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಮಾಡಿದ ಖರ್ಚೆಷ್ಟು? - state governments

ಕಳೆದ ವರ್ಷ ಅಕ್ಟೋಬರ್​ನಲ್ಲಿ ಕೇಂದ್ರ ಸರ್ಕಾರ ತನ್ನ ಮೊದಲ ಕಂತಿನಲ್ಲಿ ನೆರೆ ಪರಿಹಾರವಾಗಿ 1,200 ಕೋಟಿ ರೂ.‌ ಬಿಡುಗಡೆ ಮಾಡಿತ್ತು. ಬಳಿಕ ಈ ವರ್ಷ ಜನವರಿಯಲ್ಲಿ ಮತ್ತೊಂದು ಕಂತಿನಲ್ಲಿ 669 ಕೋಟಿ‌ ರೂ. ಬಿಡುಗಡೆ ಮಾಡಿದೆ..

ರಾಜ್ಯಕ್ಕೆ ಮತ್ತೆ ನೆರೆ ಭೀತಿ
ರಾಜ್ಯಕ್ಕೆ ಮತ್ತೆ ನೆರೆ ಭೀತಿ

By

Published : Jul 26, 2020, 10:14 PM IST

Updated : Jul 26, 2020, 11:16 PM IST

ಬೆಂಗಳೂರು :ರಾಜ್ಯ ಇದೀಗ ಮತ್ತೆ ನೆರೆ ಹಾವಳಿಯ ಭೀತಿ ಎದುರಿಸುತ್ತಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜುಲೈ-ಅಗಸ್ಟ್ ತಿಂಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಬಹುದು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ ಕಂದಾಯ ಇಲಾಖೆ ಪೂರ್ವ ತಯಾರಿಯನ್ನು ನಡೆಸುತ್ತಿದೆ. ಹಲವು ಅಣೆಕಟ್ಟುಗಳು ಬಹುತೇಕ ತುಂಬಿದ್ದು, ಒಳ ಹರಿವು ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆ ಪ್ರವಾಹ ಸಂಭವಿಸಬಹುದಾದ ಒಟ್ಟು 1,980 ಗ್ರಾಮಗಳನ್ನು ಗುರುತಿಸಲಾಗಿದ್ದು, 51 ಲಕ್ಷ ಜನರನ್ನು ಸ್ಥಳಾಂತರಿಸಲು ಚಿಂತಿಸಲಾಗಿದೆ.

ಅದರಲ್ಲೂ ಕಳೆದ ಬಾರಿಯ ಭೀಕರ ಪ್ರವಾಹ ರಾಜ್ಯವನ್ನು ಸಂಪೂರ್ಣ ನಲುಗಿಸಿ ಬಿಟ್ಟಿತ್ತು. ಕಳೆದ‌ ವರ್ಷದ ಅತಿವೃಷ್ಟಿಯಿಂದ ಸರ್ಕಾರ ಇನ್ನೂ ಹೊರಬರಲು ಸಾಧ್ಯವಾಗಿಲ್ಲ.‌ ಈಗಲೂ ಪರಿಹಾರ ಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರ ಕಳೆದ ಬಾರಿಯ ಭೀಕರ ಅತಿವೃಷ್ಟಿಗೆ ಈವರೆಗೆ ಅಳೆದು ತೂಗಿ ಪರಿಹಾರ ಹಣ ಬಿಡುಗಡೆ ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರವೇ ತನ್ನ ಬೊಕ್ಕಸದಿಂದ ಹಣ ಖರ್ಚು ಮಾಡುತ್ತಿದೆ.

ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡ್ತಿರುವುದು

ಎನ್​ಡಿಆರ್​ಎಫ್ ಮೂಲಕ ಕೊಟ್ಟಿದ್ದೆಷ್ಟು?:ಕಳೆದ ಬಾರಿಯ ಭೀಕರ ಪ್ರವಾಹದಿಂದ ರಾಜ್ಯ ಸುಮಾರು 35,160 ಕೋಟಿ ರೂ.‌ ನಷ್ಟ ಅನುಭವಿಸಿತ್ತು. ಈ‌ ಸಂಬಂಧ ಕೇಂದ್ರ ಸರ್ಕಾರಕ್ಕೆ ನಷ್ಟದ ವರದಿಯನ್ನು ನೀಡಿತ್ತು. ಆದರೆ, ಕೇಂದ್ರ ಸರ್ಕಾರ ಅಳೆದು ತೂಗಿ ಈವರೆಗೆ ರಾಜ್ಯ ಸರ್ಕಾರಕ್ಕೆ ಎನ್​ಡಿಆರ್​​ಎಫ್ ಮೂಲಕ ನೀಡಿದ್ದು ಕೇವಲ 1869 ಕೋಟಿ ರೂ. ಮಾತ್ರ.

ಕಳೆದ ವರ್ಷ ಅಕ್ಟೋಬರ್​ನಲ್ಲಿ ಕೇಂದ್ರ ಸರ್ಕಾರ ತನ್ನ ಮೊದಲ ಕಂತಿನಲ್ಲಿ ನೆರೆ ಪರಿಹಾರವಾಗಿ 1,200 ಕೋಟಿ ರೂ.‌ ಬಿಡುಗಡೆ ಮಾಡಿತ್ತು. ಬಳಿಕ ಈ ವರ್ಷ ಜನವರಿಯಲ್ಲಿ ಮತ್ತೊಂದು ಕಂತಿನಲ್ಲಿ 669 ಕೋಟಿ‌ ರೂ. ಬಿಡುಗಡೆ ಮಾಡಿದೆ. ಆ ಮೂಲಕ ನೆರೆ ಪರಿಹಾರವಾಗಿ ಕೇಂದ್ರ ಸರ್ಕಾರ ಈವರೆಗೆ ಎನ್​ಡಿಆರ್​ಎಫ್ ಮೂಲಕ ರಾಜ್ಯಕ್ಕೆ 1,869 ಕೋಟಿ ರೂ. ಬಿಡುಗಡೆ ಮಾಡಿದೆ.

ರಾಜ್ಯ ತನ್ನ ಬೊಕ್ಕಸದಿಂದ ಕೊಟ್ಟಿದ್ದೆಷ್ಟು? :ಕೇಂದ್ರದಿಂದ ನಿರೀಕ್ಷಿತ ಹಣ ಬಿಡುಗಡೆಯಾಗದ ಕಾರಣ ರಾಜ್ಯ ಸರ್ಕಾರ ತನ್ನದೇ ಬೊಕ್ಕಸದಿಂದ ನೆರೆ ಪರಿಹಾರವಾಗಿ ಒಟ್ಟು 1500 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಈ ಪೈಕಿ 1,000 ರೂ. ಹಾನಿಗೊಳಗಾದ ಮನೆಗಳ ನಿರ್ಮಾಣ, ದುರಸ್ಥಿ ಪರಿಹಾರವಾಗಿ ಬಿಡುಗಡೆ ಮಾಡಿದ್ರೆ, 500 ಕೋಟಿ ರೂ. ರಸ್ತೆ, ಸರ್ಕಾರಿ ಕಟ್ಟಡಗಳ ದುರಸ್ಥಿಗಾಗಿ ಬಿಡುಗಡೆ ಮಾಡಿದೆ. ನೆರೆ ಬಂದಾಗ ಎಸ್​ಸಿಪಿಟಿಎಸ್​ಪಿ ಅನುದಾನದಲ್ಲಿ ದಲಿತ ಕಾಲೋನಿಗಳ ಅಭಿವೃದ್ಧಿಗಾಗಿ 1,100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ ಎಸ್‌ಸಿ,ಎಸ್ಟಿ ಕಾಲೋನಿಯಲ್ಲಿನ ನೆರೆ ಸಂತ್ರಸ್ತರಿಗೆ 350 ಕೋಟಿ ರೂ. ಖರ್ಚಾಗಿದೆ.

ಈವರೆಗೆ ಮಾಡಿದ ಖರ್ಚು,ವೆಚ್ಚ ಏನು? :ಕಳೆದ‌ ಬಾರಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕಾಗಿ 557.67 ಕೋಟಿ ರೂ. ಬಿಡುಗಡೆ ಮಾಡಿದೆ. ಪ್ರವಾಹಕ್ಕೆ ಒಟ್ಟು 32,482 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಈ ಪೈಕಿ 32,424 ಮನೆಗಳಿಗೆ ತಲಾ 1 ಲಕ್ಷ ರೂ. ಬಿಡುಗಡೆ ಮಾಡಾಗಿದೆ. 11,037 ಮನೆಗಳಿಗೆ ತಲಾ 2 ಲಕ್ಷ ರೂ., 4582 ಮನೆಗಳಿಗೆ 3 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. 656 ಮನೆಗಳಿಗೆ ತಲಾ 4 ಲಕ್ಷ ರೂ. ನೀಡಲಾಗಿದೆ. ಒಟ್ಟು 47 ಮನೆಗಳಿಗೆ ಸಂಪೂರ್ಣ 5 ಲಕ್ಷ ರೂ. ಪರಿಹಾರ ಹಣ ನೀಡಲಾಗಿದೆ. ನೆರೆಗೆ ಸುಮಾರು 6.5 ಹೆಕ್ಟೇರ್ ಬೆಳೆ ನಷ್ಟ ಆಗಿತ್ತು. ಬೆಲೆ ನಷ್ಟವಾದ ರೈತರಿಗೆ 1,185 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.

ಈ ಬಾರಿ ಬಿಡುಗಡೆಯಾದ ಪರಿಹಾರ ಹಣ ಏ‌ನು? :ಈ ಬಾರಿ ಕೇಂದ್ರ ಸರ್ಕಾರ ಕರ್ನಾಟಕದ ಪಾಲಿಗೆ 1054 ಕೋಟಿ ರೂ. ಎಸ್​ಡಿಆರ್​ಎಫ್ ಹಣ ಹಂಚಿಕೆ ಮಾಡಿದೆ. ಈ ಪೈಕಿ 395 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನು, ಕೇಂದ್ರ ಸರ್ಕಾರ ಮೊದಲ ಬಾರಿ 201.8 ಕೋಟಿ ರೂ. ಸ್ಟೇಟ್ ಡಿಸಾಸ್ಟರ್ ಲಿಟಿಗೇಷನ್ ಫಂಡ್ ಅಂತಾ ಹೊಸದಾಗಿ ರಿಲೀಸ್ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಕಳೆದ ಬಾರಿ 336 ಕೋಟಿ ರೂ. ಎಸ್​ಡಿಆರ್​ಎಫ್ ಹಣ ಬಂದಿದೆ. ಈ ಬಾರಿ ಪ್ರಧಾನಿ ಮೋದಿ ಕರ್ನಾಟಕಕ್ಕೆ 1054 ಕೋಟಿ ರೂ. ಎಸ್‌ಡಿಆರ್‌ಎಫ್ ಹಣ ಹಂಚಿಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Last Updated : Jul 26, 2020, 11:16 PM IST

ABOUT THE AUTHOR

...view details