ಬೆಂಗಳೂರು: ಭಾರಿ ಮಳೆ, ಸಿಡಿಲಿನಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನ ಸೇವೆಗಳಿಗೆ ಅಡ್ಡಿಯಾಗಿದೆ. ನಗರಕ್ಕೆ ಬರುತ್ತಿದ್ದ 6 ವಿಮಾನಗಳನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ಎರಡು ಅಂತಾರಾಷ್ಟ್ರೀಯ ವಿಮಾನಗಳಾದ ಪ್ಯಾರಿಸ್ನಿಂದ ಆಗಮಿಸುವ ಏರ್ ಫ್ರಾನ್ಸ್ ಮತ್ತು ಫ್ರಾಂಕ್ಫರ್ಟ್ನಿಂದ ಲುಫ್ಥಾನ್ಸ ವಿಮಾನವನ್ನು ಚೆನ್ನೈಗೆ ಡೈವರ್ಟ್ ಮಾಡಲಾಗಿದೆ. ದೆಹಲಿ, ಮುಂಬೈ ಮತ್ತು ಪುಣೆಯಿಂದ ಇಂಡಿಗೋ ಮತ್ತು ಗೋ ಫಸ್ಟ್‌ನ ನಾಲ್ಕು ದೇಶೀಯ ವಿಮಾನಗಳ ಹಾದಿಯನ್ನೂ ಬದಲಿಸಲಾಗಿದೆ. ಆರು ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ ಒಟ್ಟು ಒಂಬತ್ತು ವಿಮಾನಗಳು ವಿಳಂಬವಾಗಿವೆ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣದಲ್ಲಿ ರಾತ್ರಿ 11.30 ರಿಂದ ಬೆಳಗ್ಗಿನ ಜಾವ 4 ಗಂಟೆಯವರೆಗೆ 109 ಮಿಮೀ ಮಳೆಯಾಗಿದ್ದು, ಕಳಪೆ ಹವಾಮಾನ ಪರಿಸ್ಥಿತಿಯಿಂದಾಗಿ ವಿಮಾನಗಳ ನಿರ್ಗಮನ ವಿಳಂಬವಾಗಿದೆ. ಬ್ಯಾಂಕಾಕ್, ದುಬೈ, ಕೌಲಾಲಂಪುರ್, ಆಮ್ಸ್ಟರ್‌ಡ್ಯಾಮ್, ಟೋಕಿಯೊ ಮತ್ತು ಕತಾರ್‌ಗೆ ವಿಮಾನಗಳು ಸರಾಸರಿ 25 ನಿಮಿಷಗಳ ಕಾಲ ವಿಳಂಬವಾಗಿವೆ ಎಂದು ವಕ್ತಾರರು ತಿಳಿಸಿದ್ದಾರೆ. ಪುಣೆ ಮತ್ತು ಅಹಮದಾಬಾದ್‌ಗೆ ಮೂರು ದೇಶೀಯ ವಿಮಾನಗಳು ವಿಳಂಬವಾಗಿವೆ.