ಬೆಂಗಳೂರು: ಅತ್ಯಾಚಾರ ಆರೋಪಗಳಲ್ಲಿ ಒಂದು ವೇಳೆ ಪೊಲೀಸ್ ತನಿಖೆಯಲ್ಲಿ ದೋಷವಿದ್ದಲ್ಲಿ ಅದರ ಲಾಭ ಆರೋಪಿಗಳಿಗೆ ಸಿಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸಾಧ್ಯಾ ಸಾಧ್ಯತೆಗಳ ಆಧಾರದಲ್ಲಿ ಆರೋಪಿಗಳನ್ನು ಅಪರಾಧಿ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅಲ್ಲದೆ, ಅತ್ಯಾಚಾರ ಆರೋಪದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ವ್ಯಕ್ತಿಯೊಬ್ಬರ ವಿರುದ್ಧದ ಪ್ರಕರಣ ರದ್ದುಪಡಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಬಾಲಕಿಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ 45 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ದೂರು ದಾಖಲಾಗಿತ್ತು. ಆದರೆ, ಸಂತ್ರಸ್ತೆ ಹೇಳಿಕೆ ಆರೋಪವನ್ನು ಸಾಬೀತು ಪಡಿಸುವಂತಿರಲಿಲ್ಲ. ಜತೆಗೆ, ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇರಲಿಲ್ಲ. ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎಂಬುದಕ್ಕೆ ಅಗತ್ಯವಾದ ವೈದ್ಯಕೀಯ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಪೊಲೀಸರು ವಿಫಲರಾಗಿದ್ದರು. ಇದೇ ಕಾರಣದಿಂದ 2005ರಲ್ಲಿ ಮಂಡ್ಯದ ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಮತ್ತು ಸಿ.ಎಂ. ಜೋಶಿ ಅವರಿದ್ದ ನ್ಯಾಯಪೀಠ ಪ್ರಕರಣ ರದ್ದು ಪಡಿಸಿದೆ. ತನಿಖಾಧಿಕಾರಿಗಳು ಆರೋಪಿಗಳ ಮೇಲೆ ಮಾಡಿರುವ ಆರೋಪವನ್ನು ಸೂಕ್ತ ರೀತಿಯಲ್ಲಿ ದಾಖಲಿಸಿಲ್ಲ. ಅಲ್ಲದೆ, ಸಾಕ್ಷ್ಯಾಧಾರಗಳು ಮತ್ತು ವೈದ್ಯಕೀಯ ದಾಖಲೆಗಳು ಸಂತ್ರಸ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ದೃಢಪಡಿಸಿಲ್ಲ. ಹೀಗಾಗಿ ಆರೋಪಿಯನ್ನು ತಪ್ಪಿತಸ್ಥ ಎನ್ನುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.