ಬೆಂಗಳೂರು :ಹೊಸ ತೆರಿಗೆ ಯಾವುದೇ ಜಾರಿ ಮಾಡಿಲ್ಲ. ಹೀಗಾಗಿ ಜನರಿಗೆ ಹೊರೆಯಾಗುವ ಸಾಧ್ಯತೆ ಇಲ್ಲ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್‌ಕೆಸಿಸಿಐ) ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಬಜೆಟ್ ಮಂಡನೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಎಂ.ಎಸ್.ಎಂ.ಇ ಕ್ಲಸ್ಟರ್ ಮಾಡಲು ಬಜೆಟ್ನಲ್ಲಿ ಒತ್ತು ಕೊಡಲಾಗಿದೆ. ಸಿಎಂ ಸಿದ್ದರಾಮಯ್ಯ ಬಜೆಟ್ಗೆ 10 ರಲ್ಲಿ 8 ಅಂಕ ಕೊಡಬಹುದು ಎಂದಿದ್ದಾರೆ.
9% ನಿಂದ 3%ಗೆ ಇಂಧನ ತೆರಿಗೆ ಇಳಿಸಿ ಎಂದು ಕೇಳಿಕೊಂಡಿದ್ದೆವು. ಅದರ ಬಗ್ಗೆ ಯಾವುದೇ ಉಲ್ಲೇಖ ಬಜೆಟ್ನಲ್ಲಿ ಇಲ್ಲ. ಕೈಗಾರಿಕೆಗಳಿಗಾಗಿಯೇ ವಿಶೇಷವಾದ ಪೋರ್ಟಲ್ ರಚನೆಗೆ ಕೇಳಿಕೊಂಡಿದ್ದೆವು. ಅದನ್ನು ಈಡೇರಿಸಲಾಗಿಲ್ಲ. ಎಪಿಎಂಸಿ ಕಾಯ್ದೆಯನ್ನೂ ಸರಳೀಕರಣಗೊಳಿಸಲು ಬೇಡಿಕೆಯಿತ್ತು. ಅದೂ ಈಡೇರಿಸಿಲ್ಲ ಎಂದು ಹೇಳಿದರು.
ಈ ಬಜೆಟ್ನಲ್ಲಿ ಯಾವುದೇ ತೆರಿಗೆ ಹೇರಿಕೆ ಮಾಡಿಲ್ಲ. ಆದರೆ ಗೈಡ್ಲೈನ್ಸ್ ವಾಲ್ಯೂ ಮಾತ್ರ ಜಾಸ್ತಿ ಮಾಡಿದ್ದಾರೆ. ಟ್ರೇಡ್ ಲೈಸೆನ್ಸ್ ತೆಗೆದು ಹಾಕಲು ಮನವಿ ಮಾಡಿದ್ದೆವು. ಅದನ್ನೂ ಈಡೇರಿಸಿಲ್ಲ. ಜಿಎಸ್ಟಿ, ಎಪಿಎಂಸಿ ಸೇರಿದಂತೆ ವ್ಯಾಪಾರಗಳಿಗೆ ಹಲವು ರಿಜಿಸ್ಟ್ರೇಷನ್ ಇರುತ್ತದೆ. ಇದರ ಜೊತೆಗೆ ಟ್ರೇಡ್ ಲೈಸೆನ್ಸ್ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.
ನಮ್ಮ ನಿಯೋಗ ಸಿಎಂ ಬಳಿ ತೆರಳಲಿದೆ:ಈ ಬಜೆಟ್ನ ನಂತರ ಎಲ್ಲವನ್ನು ಲೆಕ್ಕಾಚಾರ ಮಾಡುತ್ತೇವೆ. ನಂತರ ಈ ಬಜೆಟ್ನಲ್ಲಿ ನಮಗೆ ಎಷ್ಟು ಅನುದಾನವನ್ನು ಕೊಡಬೇಕು ಎಂಬುದರ ಬಗ್ಗೆ ಸಿಎಂ ಬಳಿ ಮಾತನಾಡಿದ್ದೆವೋ. ಯಾವುದನ್ನು ಸಿಎಂ ಘೋಷಣೆ ಮಾಡಿಲ್ಲವೋ. ಆ ವಿಚಾರದ ಕುರಿತು ಮುಂದಿನ ದಿನಗಳಲ್ಲಿ ನಮ್ಮ ನಿಯೋಗ ಸಿಎಂ ಬಳಿ ತೆರಳಿ ಚರ್ಚಿಸಲಿದೆ. ಅದರ ಬಗ್ಗೆ ಪರಿಹಾರವನ್ನು ಕಂಡುಕೊಳ್ಳಲಿದೆ ಎಂದರು.