ಬೆಂಗಳೂರು: ಕರ್ನಾಟಕದ ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆಗಳು ಮತ್ತು ವ್ಯಾಪಾರಸ್ಥರು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಸಮೀಕ್ಷೆ ನಡೆಸಲಾಗುವುದು ಎಂದು ಎಫ್ಕೆಸಿಸಿಐ ನಿರ್ಧಾರ ಮಾಡಿದೆ.
ಭಾರತವು ಈಗಾಗಲೇ ಆರ್ಥಿಕವಾಗಿ ಚೀನಾ ದೇಶವನ್ನು ಹಿಮ್ಮೆಟ್ಟಿಸಲು ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಕಾರ್ಯಕ್ರಮಗಳನ್ನು ಘೋಷಿಸಿದೆ. ಹಲವು ರಾಜ್ಯಗಳಲ್ಲಿ ಚೀನಾ ಕಂಪನಿಗಳಿಗೆ ನೀಡಿದ್ದ ಹಾಗೂ ನೀಡಬೇಕಾಗಿದ್ದ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ದಿಸೆಯಲ್ಲಿ ಚೀನಾ ದೇಶದಿಂದ ಅತೀ ಕಡಿಮೆ ಬೆಲೆಯ ವಸ್ತುಗಳ ಆಮದು ಹಾಗೂ ಕೈಗಾರಿಕೆಗಳು ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಪಟ್ಟಿ ತಯಾರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸಿ. ಆರ್. ಜನಾರ್ಧನ್ ಹೇಳಿದ್ದಾರೆ.
ಎಫ್ಕೆಸಿಸಿಐ ಸಂಸ್ಥೆಯು ತನ್ನ ಎಲ್ಲಾ ಸದಸ್ಯರಿಂದ ಈ ಮಾಹಿತಿಯನ್ನು ಸಂಗ್ರಹಿಸಲು ಕರೆ ನೀಡಿದೆ. ಪ್ರತಿಯೊಂದು ಜಿಲ್ಲೆಯಿಂದ ಈ ಮಾಹಿತಿಯನ್ನು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳ ಸಹಯೋಗದೊಂದಿಗೆ ಪಡೆದುಕೊಳ್ಳಲಾಗುವುದು. ಸಂಸ್ಥೆಯು ಈಗಾಗಲೇ ಚೀನಾ ದೇಶದಿಂದ ಸ್ಥಳಾಂತರ ಗೊಳ್ಳುತ್ತಿರುವ ಬಂಡವಾಳವನ್ನು ಕರ್ನಾಟಕಕ್ಕೆ ಆಕರ್ಷಿಸಲು ಹಾಗೂ ಕಾಂಪೀಟ್ ಚೀನಾ ಯೋಜನೆಯ ಅನುಷ್ಠಾನಕ್ಕೆ ಒಂದು ಟಾಸ್ಕ್ ಫೋರ್ಸ್ ರಚಿಸಿದೆ.
ಜುಲೈ ತಿಂಗಳಲ್ಲಿ ಎಫ್ಕೆಸಿಸಿಐ ಸಂಸ್ಥೆಯು ಚೀನಾ ಬಂಡವಾಳ ಹಾಗೂ ಕಾಂಪೀಟ್ ಚೀನಾ ಕುರಿತ ಒಂದು ದಿನದ brain storming seminar ಮಾಡುವ ಉದ್ದೇಶ ಹೊಂದಿದೆ. ಅಂದು ಈ ವಿಷಯಗಳಲ್ಲಿ ಪರಿಣತಿ ವ್ಯಕ್ತಿಗಳನ್ನು ಕರೆಸಿ ಮಾತುಕತೆ ನಡೆಸಲಾಗುವುದು.
ರಾಜ್ಯ ಸರ್ಕಾರವು ರಚಿಸಿರುವ ಇನ್ವೆಸ್ಟ್ಮೆಂಟ್ ಟಾಸ್ಕ್ ಫೋರ್ಸ್ ನಲ್ಲಿ ಎಫ್ಕೆಸಿಸಿಐ ಸಂಸ್ಥೆಗೆ ಪ್ರಾತಿನಿಧ್ಯತೆ ನೀಡಲು ಕೋರಿದ್ದು, ಸರ್ಕಾರ ಇನ್ನೂ ಪರಿಗಣಿಸಿಲ್ಲ. ಈ ವಿಷಯವನ್ನು ಕೈಗಾರಿಕಾ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಇವರ ಗಮನಕ್ಕೆ ತಂದಿದ್ದು, ಕೂಡಲೇ ಪರಿಗಣಿಸಬೇಕೆಂದು ಆಗ್ರಹಿಸುತ್ತೇನೆ ಎಂದರು.