ಬೆಂಗಳೂರು: ಸಾರಿಗೆ ನೌಕರರಿಗೆ ಕಡಿಮೆ ವೇತನ ನೀಡಲಾಗುತ್ತಿರುವುದರಿಂದ ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ. ಜತೆಗೆ ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು 5 ಮಂದಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ಸೋಮವಾರ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಮುಷ್ಕರ ಸಮಯದಲ್ಲಿ ವಜಾಗೊಂಡ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಆಡಳಿತ ಮಂಡಳಿ ಕೆಲ ಅಧಿಕಾರಿಗಳು ದ್ವೇಷ ಸಾಧಿಸುತ್ತಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ತರುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ. ಘಟಕಗಳ ಪ್ರತಿಯೊಂದು ಹಂತದ ಭ್ರಷ್ಟಚಾರದಿಂದ ನೌಕರರು ಮಾನಸಿಕ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳಲ್ಲಿ ಚಾಲ್ತಿಯಲ್ಲಿರುವ 4 ವರ್ಷಕ್ಕೊಮ್ಮೆ ಮಾಡುವ ಅವೈಜ್ಞಾನಿಕ ಚೌಕಾಸಿ, ವೇತನ ಪರಿಷ್ಕರಣಾ ಪದ್ಧತಿ ಕೈಬಿಟ್ಟು, ಸರ್ಕಾರ ಇಲಾಖೆ ಮತ್ತು ನಿಗಮ ಮಂಡಳಿಗಳಲ್ಲಿ ಚಾಲ್ತಿಯಲ್ಲಿರುವ ವೇತನ ಆಯೋಗದ ಮಾದರಿಯನ್ನು ಅಳವಡಿಸಿಕೊಂಡು ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡಬೇಕು.