ಬೆಂಗಳೂರು : ಬೆಂಗಳೂರು ನಗರವನ್ನು ಗುರಿಯಾಗಿರಿಸಿಕೊಂಡು ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಶಂಕಿತರ ಗ್ಯಾಂಗ್ನ ಕಮಾಂಡರ್ನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಆರೋಪಿಗಳಿಗೆ ನಿರ್ದೇಶನ ಕೊಡುತ್ತಿದ್ದ ಟಿ.ನಜೀರ್ನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಲಿದ್ದಾರೆ.
2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದ ರೂವಾರಿ ನಜೀರ್, ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ. ವಿವಿಧ ಆರೋಪ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರು ಜನ ಆರೋಪಿಗಳ ಸಂಪರ್ಕಕ್ಕೆ ಬಂದಿದ್ದ ಈತ, ಆ ಆರು ಜನರನ್ನು ಬ್ರೈನ್‌ವಾಶ್ ಮಾಡಿ, ದುಷ್ಕೃತ್ಯ ನಡೆಸಲು ತರಬೇತಿ ನೀಡಿದ್ದ. ಅಲ್ಲದೇ ಆರೋಪಿಗಳಿಗೆ ಬೇರೆ ಬೇರೆ ಉಗ್ರ ಸಂಘಟನೆಗಳ ನಿಯಂತ್ರಕರ ಸಂಪರ್ಕ ಸಿಗುವಂತೆಯೂ ನೋಡಿಕೊಂಡಿದ್ದಾನೆ. ನಜೀರ್ ನೀಡಿದ್ದ ಸಂಪರ್ಕದ ನೆರವಿನಿಂದಲೇ ಆರೋಪಿ ಜುನೈದ್ ಸದ್ಯ ದುಬೈಗೆ ತೆರಳಿದ್ದಾನೆ. ನಜೀರ್ನ ಸೂಚನೆಯಂತೆಯೇ ಎಲ್ಲಾ ಶಂಕಿತರು ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಆತನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದುಕೊಳ್ಳಲು ಮುಂದಾಗಿರುವುದಾಗಿ ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.