ಬೆಂಗಳೂರು:ಬಸ್ ನಿಲ್ದಾಣಗಳು, ಬಸ್‌ಗಳಲ್ಲಿ ಸಾರ್ವಜನಿಕರ ಜೇಬುಗಳ್ಳತನ ಮಾಡಿಕೊಂಡಿದ್ದ ಒಂದೇ ಕುಟುಂಬದ ಸದಸ್ಯರು ಸಹಿತ ಐವರನ್ನು ಸಂಪಂಗಿರಾಮ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕದ್ರಿ ವೇಲು, ಕನ್ಯಾಕುಮಾರ್, ಮಹೇಶ್, ಸುಂದರ್ ರಾಜ್ ಹಾಗೂ ಸೈಯ್ಯದ್ ಸಲೀಂ ಬಂಧಿತರು.
ಬಸವನಗುಡಿಯ ಮನೆಯೊಂದರಲ್ಲಿ ವಾಸವಿದ್ದ ಆರೋಪಿಗಳು ಬಸ್ ನಿಲ್ದಾಣಗಳು, ಬಸ್‌ಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ಪ್ರಯಾಣಿಕರ ಸೋಗಿನಲ್ಲಿ ಬಂದು ಇತರೆ ಪ್ರಯಾಣಿಕರ ಗಮನವನ್ನು ಕ್ಷಣಾರ್ಧದಲ್ಲಿ ಬೇರೆಡೆ ಸೆಳೆದು ಅವರ ವ್ಯಾಲೆಟ್, ಚಿನ್ನಾಭರಣ ಎಗರಿಸಿ ಪರಾರಿಯಾಗುತ್ತಿದ್ದರು.
ಬಹುತೇಕ ಸಂದರ್ಭಗಳಲ್ಲಿ ಕಳೆದುಕೊಂಡವರು ದೂರು ನೀಡದಿರುವುದೇ ಆರೋಪಿಗಳಿಗೆ ವರದಾನವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಲಸೂರು ಗೇಟ್, ಮೆಜೆಸ್ಟಿಕ್, ಉಪ್ಪಾರಪೇಟೆ ಸದಾಶಿವನಗರ ವ್ಯಾಪ್ತಿಯ ಬಸ್ ನಿಲ್ದಾಣಗಳು, ಬಸ್‌ಗಳಲ್ಲಿ ಜೇಬುಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದ್ದ ಸಂಪಂಗಿರಾಮ ಠಾಣಾ ನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
"ಸಂಪಂಗಿರಾಮ ನಗರ ಠಾಣಾ ಪೊಲೀಸ್ ಸಿಬ್ಬಂದಿ ಉತ್ತಮ ಪತ್ತೆ ಕಾರ್ಯ ಮಾಡಿದ್ದು, ಸದ್ಯ ಐವರ ಬಂಧನದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆ ಮಾಡಲಾಗುತ್ತಿದೆ" ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಇದನ್ನೂ ಓದಿ:33 ವರ್ಷಗಳ ಬಳಿಕ ಕಳ್ಳನನ್ನು ಬಂಧಿಸಿದ ಬಿಹಾರ ಪೊಲೀಸರು.
ವಧು ಹುಡುಕಿಕೊಡುವುದಾಗಿ ವಂಚನೆ; ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ:ಮ್ಯಾಟ್ರಿಮೋನಿಯಲ್ಲಿ ವಧು ಹುಡುಕುತ್ತಿದ್ದವನಿಗೆ ಹುಡುಗಿ ಹುಡುಕಿಕೊಡುವುದಾಗಿ ಹಣ ಪಡೆದು ವಂಚಿಸಿದ ವ್ಯಕ್ತಿಯ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ರಾಹ್ಮಣ ವೇದಿಕಾ ಟ್ರಸ್ಟ್‌ನ ಸಿಬ್ಬಂದಿ ಎಂದು ಪರಿಚಯಿಸಿಕೊಂಡ ಸುಧಾಕರ್ ರೆಡ್ಡಿ ಎಂಬಾತ ತಮ್ಮ ಮಗನಿಗೆ ವಧು ಹುಡುಕಿ ಕೊಡುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ರವಿಚಂದ್ರನ್ ಎಂಬವರು ಠಾಣಾ ಮೆಟ್ಟಿಲೇರಿದ್ದಾರೆ. ಬ್ರಾಹ್ಮಣ ಸಮುದಾಯದವರಾದ ರವಿಚಂದ್ರನ್ ತಮ್ಮ ಮಗ ಚಂದ್ರಶೇಖರ್ಗೆ ಮದುವೆ ಮಾಡಲು ಮ್ಯಾಟ್ರಿಮೋನಿಯಲ್ಲಿ ವಧು ಹುಡುಕುತ್ತಿದ್ದರು. ಇದೇ ಸಂದರ್ಭದಲ್ಲಿ ರವಿಚಂದ್ರನ್ ಅವರಿಗೆ ಕರೆ ಮಾಡಿದ್ದ ಸುಧಾಕರ್ ರೆಡ್ಡಿ ತಾನು ಬ್ರಾಹ್ಮಣ ವೇದಿಕಾ ಟ್ರಸ್ಟ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದ. ನಂತರ ನಿಮ್ಮ ಮಗನಿಗೆ ಸೂಕ್ತ ವಧುವನ್ನು ನಾನು ಹುಡುಕಿಕೊಡುತ್ತೇನೆ ಎಂದು ಹಂತಹಂತವಾಗಿ 86 ಸಾವಿರ ರೂ ಪಡೆದುಕೊಂಡಿದ್ದ. ನಂತರ ವಧುವನ್ನೂ ಹುಡುಕದೆ ಹಣ ವಾಪಾಸ್ ಕೊಡದೆ ನಾಪತ್ತೆಯಾಗಿದ್ದಾನೆ. ಹಣ ಕಳೆದುಕೊಂಡಿರುವ ರವಿಚಂದ್ರನ್ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನಕಲಿ ATM ಕಾರ್ಡ್ ಬಳಸಿ ಬ್ಯಾಂಕಿಗೆ ಮೋಸ: ದಾವಣಗೆರೆ ಪೊಲೀಸರ ಬಲೆಗೆ ಅಂತರ್‌ರಾಜ್ಯ ವಂಚಕರು