ಬೆಂಗಳೂರು: ಬೈಂದೂರು ವಿಧಾನಸಭಾಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧಿತರಾದ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ ಐದು ಮಂದಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣ ಪ್ರಮುಖ ಆರೋಪಿತೆಯಾಗಿರುವ ಚೈತ್ರಾ ಕುಂದಾಪುರ, ರಮೇಶ್, ದೇವರಾಜ್, ಶ್ರೀಕಾಂತ್, ಪ್ರಜ್ವಲ್ ಅವರನ್ನು ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಬಂಧಿಸಿ ಇಂದು ನಗರದ ಸಿಸಿಬಿ ಕಚೇರಿಗೆ ಅಧಿಕಾರಿಗಳು ಕರೆತಂದರು.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರುಪಡಿಸಿದರು. ಆರೋಪಿಗಳ ವಿರುದ್ಧ 5 ಕೋಟಿಗೂ ಹೆಚ್ಚು ಹಣ ವಂಚನೆ ಇದ್ದು, ಕೃತ್ಯ ಎಸಗಲು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಬಂಧಿತರಿಂದ ಹಣವನ್ನ ರಿಕವರಿ ಮಾಡಿಕೊಳ್ಳಬೇಕಿದೆ. ಈ ಸಂಬಂಧ 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಬೇಕು ಎಂದು ಸಿಸಿಬಿ ಪರ ವಕೀಲರು ಮನವಿ ಮಾಡಿದರು. ಮನವಿಗೆ ಪುರಸ್ಕರಿಸಿದ ನ್ಯಾಯಾಲಯವು ಸೆ.23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿತು. ಪ್ರಕರಣದ ಮತ್ತೊಬ್ಬ ಆರೋಪಿತ ಗಗನ್ ಕಡೂರು ಎಂಬಾತನ್ನ ನಿನ್ನೆ ಬಂಧಿಸಿ ಈಗಾಗಲೇ ಪೊಲೀಸ್ ವಶಕ್ಕೆ ಪಡೆದಿದ್ದಾರೆ.