ಬೆಂಗಳೂರು :ಒಂದೇ ಕುಟುಂಬದ ಐವರು ದಾರುಣ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಈವರೆಗೂ ಗೊಂದಲದ ಗೂಡಾಗಿದ್ದ 9 ತಿಂಗಳ ಹಸುಗೂಸಿನ ಸಾವಿನ ಕಾರಣ ಕೊನೆಗೂ ಮರಣೋತ್ತರ ಪರಿಕ್ಷೆಯಲ್ಲಿ ಹೊರ ಬಿದಿದೆ. ಆತ್ಮಹತ್ಯೆಗೆ ಮುಂದಾದ ತಾಯಿಯಿಂದ ನಡೆದ ಆ ಕೃತ್ಯ ಈಗ ಬಟಾಬಯಲಾಗಿದೆ.
ಸೆಪ್ಟೆಂಬರ್ 17ರಂದು ಬೆಳಕಿಗೆ ಬಂದಿದ್ದ ಬ್ಯಾಡರಹಳ್ಳಿಯ ತಿಗಳರ ಪಾಳ್ಯದ ಒಂದೇ ಕುಟುಂಬದ ಐವರ ದಾರುಣ ಸಾವಿನ ಕಥೆಯ ಅಸಲಿ ಸಂಗತಿ ಹೊರ ಬಿದ್ದಿವೆ. ಘಟನೆ ಬೆಳಕಿಗೆ ಬಂದಾಗ ಐದು ಮೃತದೇಹಗಳಲ್ಲಿ ನಾಲ್ಕು ನೇಣು ಬಿಗಿದ ಸ್ಥಿತಿಯಲ್ಲಿದ್ದವು. ಪುಟ್ಟ ಕಂದಮ್ಮನ ಮೃತದೇಹ ಮಂಚದ ಮೇಲಿತ್ತು.
ಹೀಗಾಗಿ, ನಾಲ್ವರು ಆತಹತ್ಯೆ ಮಾಡಿಕೊಂಡರು, ಆ ಪುಟ್ಟ ಕಂದಮ್ಮ ಮೃತಪಟ್ಟಿದ್ದಾದರೂ ಹೇಗೆ ಅನ್ನೋ ಪ್ರಶ್ನೆ ಇತ್ತು. ಆದರೆ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದ ಪೊಲೀಸರಿಗೆ ಕೊನೆಗೂ ಮರಣೋತ್ತರ ವರದಿ ಕೈಸೇರಿದೆ. ಪುಟ್ಟ ಕಂದಮ್ಮನ ಸಾವು ಅಸಹಜವಲ್ಲ, ಅದು ಕೊಲೆ ಅನ್ನೋದು ಬಯಲಾಗಿದೆ.
ಸಾವಿಗೂ ಮುನ್ನ ಸಿಂಧೂರಾಣಿ ತನ್ನ 9 ತಿಂಗಳ ಮಗುವನ್ನು ಕೊಂದಿದ್ದಳು. ಹಸಿರು ಬಣ್ಣದ ಬಟ್ಟೆಯಿಂದ ಪುಟ್ಟ ಕಂದಮ್ಮನ ಕತ್ತು ಬಿಗಿದು ಉಸಿರುಗಟ್ಟಿಸಿ ಸಾಯಿಸಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಈ ಮೂಲಕ ಆತ್ಮಹತ್ಯೆಗೆ ಮುಂದಾಗಿದ್ದ ತಾಯಿ, ತನ್ನ ಹೆತ್ತ ಕರುಳಿಗೆ ಅಂತ್ಯ ಕಾಣಿಸಿದ್ದಾಳೆ.