ಬೆಂಗಳೂರು: ತ್ರಿಪುರಾದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಸಿಲಿಕಾನ್ ಸಿಟಿಗೆ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಪೆಡ್ಲರ್‌ಗಳನ್ನು ಬಾಣಸವಾಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಖಮರುಲ್ಲಾ ಇಸ್ಲಾಂ (27), ಸಾಹೀಬ್ ಮಿಯಾ (40) ಮತ್ತು ಖುರ್ಷಿದ್ ಮಿಯಾ (21) ಬಂಧಿತರು. ಈ ಮೂವರು ತ್ರಿಪುರಾದ ಮಧುಪುರ ಎಂಬಲ್ಲಿ ಹಾಗೂ ವಿವಿಧೆಡೆಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ರೈಲಿನ ಮೂಲಕ ಬೆಂಗಳೂರಿಗೆ ತರುತ್ತಿದ್ದರು. ಬಳಿಕ ನಗರದ ವಿವಿಧೆಡೆ ಅಕ್ರಮವಾಗಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಭೀಮಾ ಶಂಕರ್ ಗುಳೇದ್ ತಿಳಿಸಿದ್ದಾರೆ.
ನಗರದ ಜಾನಕಿ ರಾಮ ಲೇಔಟ್ ಆಟೋ ನಿಲ್ದಾಣದ ಹತ್ತಿರ ರೈಲ್ವೆ ನಿಲ್ದಾಣದ ಕಡೆಗೆ ಹೋಗುವ ರಸ್ತೆಯಲ್ಲಿ ಈ ಮೂವರು ಗಾಂಜಾವನ್ನಿಟ್ಟುಕೊಂಡು ಸಾರ್ವಜನಿಕರಿಗೆ ಮಾರಲು ಯತ್ನಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬಾಣಸವಾಡಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 6 ಲಕ್ಷ ರೂ.ಮೌಲ್ಯದ 20 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.