ಬೆಂಗಳೂರು:ನಾವು ಭರವಸೆ ನೀಡಿರುವ ಐದು ಗ್ಯಾರಂಟಿ ಯೋಜನೆ ಜಾರಿಗೆ ತರುವುದು ಖಚಿತ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇಂದು ವಿಧಾನಸಭೆಯಲ್ಲಿ ನಡೆದ ಸಚಿವರುಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಎಲ್ಲ ಸಚಿವರು ಮಾಹಿತಿ ನೀಡಿದ್ದಾರೆ. ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದಲೂ ಮಾಹಿತಿ ಸಂಗ್ರಹ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಜಾರಿ ಸಂಬಂಧ ಸಚಿವರು ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಯಾವ ಗಾಸಿಪ್ ಕೂಡ ಮಾಡಬೇಡಿ. ಹಂಗಂತೆ, ಹಿಂಗಂತೆ ಅಂತ ಯಾರೂ ಹೇಳುವುದಕ್ಕೆ ಹೋಗಬೇಡಿ. ತೀರ್ಮಾನ ಮಾಡುವುದು ಸರ್ಕಾರ. ನಿಮಗೆ ಅನಿಸಿದ್ದನ್ನೆಲ್ಲ ಹೇಳೋಕಾಗಲ್ಲ. "ಹೇಗೆ ಮಾಡಬೇಕು, ಏನು ಮಾಡಬೇಕು" ಅಂತ ಸರ್ಕಾರ ಹಾಗೂ ನಾವು ಯೋಚನೆ ಮಾಡುತ್ತೇವೆ. ನೀವು ಬಹಳ ಸ್ಪೀಡ್ನಲ್ಲಿದ್ದೀರಿ. ನಾವು ನಿಮ್ಮಷ್ಟು ಸ್ಪೀಡ್ ಇಲ್ಲ ಎಂದು ಹೇಳಿದರು.
ಎಲ್ಲ ಅಧಿಕಾರಿಗಳ ಬಳಿ ಏನೇನು ವರ್ಕೌಟ್ ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಕೊಂಡಿದ್ದಾರೆ. ಆರ್ಥಿಕ ಹೊರೆ ಎಷ್ಟಾಗುತ್ತೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಆರ್ಥಿಕ ಇಲಾಖೆ ಅಧಿಕಾರಿಗಳು ಕೂಡ ಸಲಹೆ ನೀಡಿದ್ದಾರೆ. ರೀ ವರ್ಕ್ ಮಾಡಿ ಕ್ಯಾಬಿನೆಟ್ಗೆ ಸಲ್ಲಿಸಲು ತಿಳಿಸಿದ್ದಾರೆ. ರೀ ವರ್ಕ್ ಮಾಡಿ ಆಲೋಚನೆ ಮಾಡುತ್ತೇವೆ. ಶುಕ್ರವಾರ ನಾವು ಸಂಪುಟ ಸಭೆ ಸೇರಿ ವಿವರವಾಗಿ ಚರ್ಚೆ ಮಾಡಿ ತಿಳಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಗ್ಯಾರಂಟಿ ಯೋಜನೆಗಳ ಜಾರಿಗೆ ನಾವು ಬದ್ಧರಾಗಿದ್ದೇವೆ. ಅಧಿಕಾರಿಗಳು ತಮ್ಮ ಅಭಿಪ್ರಾಯ, ಸಲಹೆ ತಿಳಿಸಿದ್ದಾರೆ. ಶುಕ್ರವಾರ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ, ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ. ಯಾರೂ ಕೂಡ ಊಹಾಪೋಹಗಳಿಗೆ ಅವಕಾಶ ನೀಡಬೇಡಿ. ಆ ಬಗ್ಗೆ ಹೆಚ್ಚಿನ ಗಮನ ನೀಡಬೇಡಿ. ನಾವು ನಮ್ಮ ಪ್ರಣಾಳಿಕೆ, ಕೊಟ್ಟಿರುವ ಮಾತಿನ ಬಗ್ಗೆ ಅರಿವಿದೆ. ಈ ಯೋಜನೆಗಳನ್ನು ಕ್ರಮಬದ್ಧವಾಗಿ ಅನುಷ್ಠಾನಕ್ಕೆ ತರುವುದು ನಮ್ಮ ಆದ್ಯತೆ ಎಂದರು.
ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ''ಅವರು ಏನಾದರೂ ಹೇಳಿಕೊಳ್ಳಲಿ. ಸಲಹೆಯಾದರೂ ನೀಡಲಿ, ಒತ್ತಡ ಬೇಕಾದರೂ ಹಾಕಲಿ, ಹೋರಾಟ ಬೇಕಾದರೂ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವವರನ್ನು ತಡೆಯಲು ಸಾಧ್ಯವಿಲ್ಲ. ಬಿಜೆಪಿ ಈ ಹಿಂದೆ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ಆಗ ಮಾತನಾಡಲಿಲ್ಲ. ರೈತರಿಗೆ 10 ಗಂಟೆ ವಿದ್ಯುತ್ ಉಚಿತ ನೀಡುವುದಾಗಿ ಹೇಳಿದ್ದರು. ಆ ಬಗ್ಗೆಯೂ ಮಾತನಾಡಲಿಲ್ಲ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆಗಳ ಪೈಕಿ ಕೇವಲ 50 ಭರವಸೆ ಈಡೇರಿಸಿದ್ದಾರೆ. ಆಗಲೂ ಮಾತನಾಡಲಿಲ್ಲ. ನಾವು ನಮ್ಮ ಯಾಜನೆಗಳನ್ನು ಕ್ರಮಬದ್ಧವಾಗಿ, ನ್ಯಾಯಬದ್ಧವಾಗಿ ಜಾರಿ ಮಾಡಿ ನ್ಯಾಯ ಒದಗಿಸಬೇಕು. ರಾಜ್ಯ ಹಾಗೂ ಮತದಾರ ಉಳಿಯಬೇಕು ಅದು ನಮ್ಮ ಗುರಿ'' ಎಂದು ತಿಳಿಸಿದರು.