ಬೆಂಗಳೂರು:ನಗರವನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಕೊರೊನಾ ವೈರಸ್ ಹಾಟ್ಸ್ಪಾಟ್ಗಳನ್ನಾಗಿ ಗುರ್ತಿಸಿದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ರೆಡ್ ಜೋನ್ಗಳನ್ನಾಗಿ ಕರ್ನಾಟಕ ಸರ್ಕಾರ ಗುರ್ತಿಸಿದೆ.
ರಾಜ್ಯ ಸರ್ಕಾರ ಕೊರೊನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ಈ ಕೆಂಪು ವಲಯಗಳನ್ನು ಗುರುತು ಮಾಡಿದ್ದು, ಈ ಜಿಲ್ಲೆಗಳಲ್ಲಿ ತೀವ್ರ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಬೆಂಗಳೂರು ನಗರವೊಂದರಲ್ಲೇ 1.2 ಕೋಟಿ ಜನಸಂಖ್ಯೆ ಇದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ರೆಡ್ ಜೋನ್ಗಳಾಗಿ ಘೋಷಣೆ ಮಾಡಿದ ಜಿಲ್ಲೆಗಳಲ್ಲಿ ತೀವ್ರ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತದೆ. ಕ್ವಾರಂಟೈನ್ನಲ್ಲಿರುವ ಹಾಗೂ ಕ್ವಾರಂಟೈನ್ನಲ್ಲಿ ಇರುವವರೊಂದಿಗೆ ಸಂಪರ್ಕದಲ್ಲಿರುವವರ ಮೇಲೆ ತೀವ್ರ ನಿಗಾ ಇಡಲಾಗುತ್ತದೆ. ಲಾಕ್ ಡೌನ್ ಅನ್ನು ಮತ್ತಷ್ಟು ಕಠಿಣಗೊಳಿಸಲಾಗುತ್ತದೆ.
ಮೈಸೂರು ಜಿಲ್ಲೆಯೊಂದರಲ್ಲೇ 13 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ನಂಜನಗೂಡಿನ ಫಾರ್ಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದವರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಚಾಮರಾಜನಗರದ ಹಲವು ಮಂದಿಯೂ ಅಲ್ಲಿ ಕೆಲಸ ಮಾಡುತ್ತಿದ್ದು ಸೋಂಕು ಹರಡುವ ಭೀತಿಯಿದ್ದು ಎಲ್ಲರ ಮೇಲೂ ನಿಗಾ ಇಡಲಾಗಿದೆ.
ಈ ಬಗ್ಗೆ ಕರ್ನಾಟಕ ಆರೋಗ್ಯ ಇಲಾಖೆ ಟ್ವೀಟ್ ಮಾಡಿದ್ದು ಬೆಂಗಳೂರು ಸೇರಿದಂತೆ ದೇಶದ ಏಳು ನಗರಗಳನ್ನು 30ಕ್ಕಿಂತ ಹೆಚ್ಚು ಕೊರೊನಾ ಸೋಂಕು ದೃಢವಾಗಿರುವ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಹಾಗೂ ಚಿಕ್ಕಬಳ್ಳಾಪುರವನ್ನು 14 ದಿನಗಳಲ್ಲಿ ಅತಿ ಹೆಚ್ಚು ಸೋಂಕಿನ ಪ್ರಕರಣಗಳು ಕಂಡುಬಂದಿರುವ ರಾಜ್ಯ ಎಂದು ಗುರ್ತಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.