ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ಆರೋಪಕ್ಕೆ ಪಂಚ ಸಚಿವರ ತಿರುಗೇಟು... ಭ್ರಷ್ಟಾಚಾರ ನಿರೂಪಿಸಿ ಎಂದು ಸವಾಲು - Revenue Minister R. Ashok

ಕೋವಿಡ್​ ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಬಹುದೊಡ್ಡ ಹಗರಣ ನಡೆಸಿದೆ ಎಂದು ಆರೋಪಿಸಿ ಸುದ್ದಗೋಷ್ಠಿ ನಡೆಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಬಿಜೆಪಿ ಒಕ್ಕೂರಲಿನಿಂದ ಕಿಡಿಕಾರಿದೆ. ಕಾಂಗ್ರೆಸ್​​ನ ಆರೋಪದಲ್ಲಿ ಹುರುಳಿಲ್ಲ ಎಂದಿದ್ದು, ದಾಖಲೆ ಸಹಿತ ಸ್ಪಷ್ಟನೆ ನೀಡಿದ್ದಾರೆ.

Five BJP  minister briefed  against congress allegation of corruption in covid
ಕಾಂಗ್ರೆಸ್​ ಆರೋಪಕ್ಕೆ ಪಂಚ ಸಚಿವರ ತಿರುಗೇಟು...ಭ್ರಷ್ಟಾಚಾರ ನಿರೂಪಿಸಿ ಎಂದು ಸವಾಲು

By

Published : Jul 23, 2020, 6:41 PM IST

Updated : Jul 23, 2020, 7:58 PM IST

ಬೆಂಗಳೂರು:ಕೋವಿಡ್ ಸಂಬಂಧ ವಿವಿಧ ಇಲಾಖೆಗಳಿಂದ ಖರ್ಚು ಮಾಡಿದ್ದೇ ಕೇವಲ 2,118 ಕೋಟಿ ರೂಪಾಯಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿರುವ ಹಗರಣ ಆರೋಪ ಸಂಬಂಧ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ‌ ಅವರು ಮಾತನಾಡಿದರು.

ಕೊರೊನಾ ಸಂಬಂಧ ಕಾಂಗ್ರೆಸ್​ ಒಟ್ಟು 4,167 ಕೋಟಿ ರೂ. ಖರ್ಚು ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ ಎಲ್ಲಾ ಇಲಾಖೆಗಳಿಗೆ 506 ಕೋಟಿ ರೂ. ಕೋವಿಡ್ ನಿಯಂತ್ರಣ ಸಂಬಂಧ ಬಿಡುಗಡೆ ಮಾಡಲಾಗಿದೆ. ಬಾಧಿತರ ಪರಿಹಾರ ಕ್ರಮಗಳಿಗೆ 1,611.7 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಒಟ್ಟು 2,118 ಕೋಟಿ ರೂ. ಮಾತ್ರ ಖರ್ಚಾಗಿದೆ ಎಂದು ದಾಖಲೆ ಸಮೇತರಾಗಿ ತಿರುಗೇಟು ನೀಡಿದರು.

ಐವರು ಸಚಿವರಿಂದ ಸುದ್ದಿಗೋಷ್ಠಿ- ಕಾಂಗ್ರೆಸ್​ ಆರೋಪಕ್ಕೆ ಸ್ಪಷ್ಟನೆ

ವೈದ್ಯಕೀಯ ಸಲಕರಣೆ ಖರೀದಿಗಾಗಿ ಆರೋಗ್ಯ ಇಲಾಖೆ 366.70 ಕೋಟಿ ರೂ., ವೈದ್ಯಕೀಯ ಶಿಕ್ಷಣ 33 ಕೋಟಿ ರೂ‌‌., ಎಲ್ಲಾ ಡಿಸಿಗಳಿಗೆ 68.02 ಕೋಟಿ ರೂ., ಡಿಸ್ಟ್ರಿಕ್ಟ್ ಮಿನರಲ್ ಫಂಡ್ ಗೆ 23.97 ಕೋಟಿ ರೂ., ಕಾರ್ಮಿಕ ಇಲಾಖೆಗೆ 4.25 ಕೋಟಿ ರೂ., ಗೃಹ ಇಲಾಖೆಗೆ 5.62 ಕೋಟಿ ರೂ., ಕಾರಾಗೃಹ ಇಲಾಖೆಗೆ 1.05 ಕೋಟಿ ರೂ., ಸಾರಿಗೆ ಇಲಾಖೆಗೆ 2.36 ಕೋಟಿ ರೂ., ಬಿಬಿಎಂಪಿಗೆ 86 ಲಕ್ಷ ರೂ., ಸಮಾಜ ಕಲ್ಯಾಣ ಇಲಾಖೆಗೆ 65 ಲಕ್ಷ ರೂ. ಸೇರಿ ಒಟ್ಟು 506 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರು ಹತಾಶರಾಗಿದ್ದಾರೆ. ಅವರಲ್ಲಿ ಯಾರು ಲೀಡರ್ ಎಂಬ ಪೈಪೋಟಿಗೆ ಬಿದ್ದಿದ್ದಾರೆ. ಅವರಿಗೆ ಯಾವುದು ಮಂಜೂರಾತಿ, ಯಾವುದು ಖರ್ಚು ಎಂಬುದು ಗೊತ್ತಿದ್ದರೂ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಸಲಕರಣೆ ಖರೀದಿಗಾಗಿ ವಿವಿಧ ಇಲಾಖೆಗಳು 506 ಕೋಟಿ ರೂ. ಮಾತ್ರ ಖರ್ಚು ಮಾಡಿದೆ. ಅವರ ಆರೋಪ ಸುಳ್ಳಿನ‌ ಕಂತೆಯಾಗಿದೆ. ಇದು ನಿರಾಧಾರ ಆರೋಪ ಆಗಿದೆ. ಅವರು ಕೋವಿಡ್ ಬೆಂಕಿಯಲ್ಲಿ ರಾಜಕೀಯ ರೊಟ್ಟಿ ಬೇಯಿಸಲು ಹೊರಟಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸತ್ಯದ ಬಲ‌ ನಮಗಿದೆ. ಬಡವರ ಸೇವೆಯತ್ತ ನಮ್ಮ ಲಕ್ಷ್ಯ ಇದೆ. ನಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮೊದಲು ನೀವು ಮಾಡಿದ್ದ ಅವ್ಯವಹಾರದ ಲೆಕ್ಕವನ್ನು ಕೊಡಿ. ಸುಳ್ಳು ಆರೋಪಕ್ಕೆ ತನಿಖೆ ಮದ್ದಲ್ಲ. ಇದು ರಾಜಕೀಯ ಪ್ರೇರೇಪಿತ ಆರೋಪ ಎಂದು ಕಿಡಿಕಾರಿದರು.

ಆರೋಪ ಪ್ರತಿ ಲೆಕ್ಕ ಕೊಟ್ಟ ಪಂಚ ಸಚಿವರು

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕೋವಿಡ್ ಭ್ರಷ್ಟಾಚಾರ ಸಂಬಂಧ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಕೂಡಲೇ ಸಿಎಂ ಸೂಚನೆ ಮೇರೆಗೆ ಪಂಚ ಸಚಿವರಾದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಡಿಸಿಎಂ ಅಶ್ವತ್ಥ್ ‌ನಾರಾಯಣ್, ವೈದ್ಯಕೀಯ ಸಚಿವ ಕೆ. ಸುಧಾಕರ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ದಾಖಲೆ ಸಮೇತ ಕಾಂಗ್ರೆಸ್ ಆರೋಪಕ್ಕೆ ಪ್ರತಿಯಾಗಿ ಸ್ಪಷ್ಟೀಕರಣ ನೀಡಿದರು.

ಮೊದಲಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ನೂರಾರು ಹಗರಣ ಮಾಡಿ, ರಾಜ್ಯ ಲೂಟಿ ಹೊಡೆದ ಪಕ್ಷ ಕಾಂಗ್ರೆಸ್. ಈಗ ಸಮರ್ಪಕ ದಾಖಲೆ ಇಲ್ಲದೆ ಆರೋಪ‌ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಸಲಹೆ ಸೂಚನೆ ಕೊಡುವ ಬದಲು, ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.

ಎಲ್ಲಾ ಜಿಲ್ಲಾಧಿಕಾರಿಗಳಿಗೆ 232 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಈವರೆಗೆ ಖರ್ಚಾಗಿದ್ದು ಕೇವಲ 159 ಕೊಟಿ ರೂ. ಆದರೆ ಕಾಂಗ್ರೆಸ್ 700 ಕೋಟಿ ಡಿಸಿಗಳಿಗೆ ಕೊಡಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ.

ಮಂತ್ರಿಗಳು ಯಾರೂ ಭೇಟಿ ಮಾಡಿಲ್ಲ ಅಂದಿದ್ದಾರೆ. ಆದರೆ ಸಿದ್ದರಾಮಯ್ಯ ಒಂದೇ ಒಂದು ಆಸ್ಪತ್ರೆಗೆ ಹೋಗಿದ್ದಾರೆ. ಅದೂ ಹೆದರಿಕೊಂಡು ಹೋಗಿದ್ದಾರೆ. ಸಚಿವರಾದ ಸುಧಾಕರ್, ಆರ್.ಅಶೋಕ್, ಶ್ರೀರಾಮುಲು ಅನೇಕ ಬಾರಿ ಜಿಲ್ಲೆಗಳಿಗೆ ಭೇಟಿ ನೀಡಿ, ಆಸ್ಪತ್ರೆಗಳಿಗೆ ಹೋಗಿದ್ದಾರೆ‌. ಅನೇಕ ಕೈ ನಾಯಕರು ಮನೆಯಿಂದ ಹೊರಗೇ ಬಂದೇ ಇಲ್ಲ ಎಂದು ಕಿಡಿಕಾರಿದರು.

ಅಶ್ವತ್ಥ್ ನಾರಾಯಣ್ ತಿರುಗೇಟು

ಆರೋಗ್ಯ ಇಲಾಖೆ ಖರೀದಿ ಸಂಬಂಧ ಸ್ಪಷ್ಟೀಕರಣ ನೀಡಿದ ಡಿಸಿಎಂ ಅಶ್ವತ್ಥ್ ‌ನಾರಾಯಣ್, ಕಾಂಗ್ರೆಸ್ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದು, ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು‌ ವಾಗ್ದಾಳಿ ನಡೆಸಿದರು.

ನಾವು ಸದನದಲ್ಲೂ ಸಹ ಲೆಕ್ಕ ಕೊಡಲು ತಯಾರಾಗಿದ್ದೇವೆ. ಕೋವಿಡ್ ಸಂದರ್ಭ ಈ ರೀತಿ ಆರೋಪ ಮಾಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲಿ 750 ಕೋಟಿ ರೂ. ಖರ್ಚಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಈವರೆಗೆ 290 ಕೋಟಿ ರೂ. ಮಾತ್ರ ಖರ್ಚಾಗಿದೆ ಎಂದರು.

ಮಾರ್ಚ್ ತಿಂಗಳಲ್ಲಿ1.50 ಲಕ್ಷ ಪಿಪಿಇ ಕಿಟ್ ಅನ್ನು 330 ರೂ.ಗೆ ಖರೀದಿ‌ ಮಾಡಿದ್ದೇವೆ. ಏಪ್ರಿಲ್ ತಿಂಗಳಲ್ಲಿ 700, 600, 800 ರೂ. ನಲ್ಲಿ ಪಿಪಿಇ ಕಿಟ್ ಖರೀದಿಸಿದ್ದೇವೆ. ಚೀನಾದಿಂದ ಖರೀದಿಸಿದ್ದಾರೆ ಎಂದು ಆರೋಪಿಸಿದ್ದಾರೆ‌. ಮಾರ್ಚ್, ಏಪ್ರಿಲ್​​​ನಲ್ಲಿ ನಮ್ಮಲ್ಲಿ ಪಿಪಿಇ ಕಿಟ್ ತಯಾರು ಮಾಡುತ್ತಿರಲಿಲ್ಲ. ಅದಕ್ಕೆ ಚೀನಾದಿಂದ ಆಮದು ಮಾಡಿಕೊಂಡಿದ್ದೇವೆ. ಆಗ 3 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಿದ್ದೇವೆ. ಮಾರ್ಚ್ ತಿಂಗಳಲ್ಲಿ ಸರಬರಾಜು ಆಗಿರುವುದನ್ನು ಈಗ ಸರಬರಾಜು ಆಗಿರುವಂತೆ ಪ್ರತಿಬಿಂಬಿಸುತ್ತಿದ್ದಾರೆ ಎಂದು‌ ಕಿಡಿಕಾರಿದರು.

ಸುಧಾಕರ್ ಕೊಟ್ಟ ಸ್ಪಷ್ಟೀಕರಣವೇನು..?

ಇದೇ ವೇಳೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಕಾಂಗ್ರೆಸ್​ನವರ ತಟ್ಟೆಯಲ್ಲಿ ಹೆಗ್ಗಣ ಇದ್ದು, ಈಗ ನೊಣ ಹುಡುಕಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ಹುಡುಕುತ್ತಿದ್ದೀರಿ. ನನ್ನ ಇಲಾಖೆಯಲ್ಲಿ 815 ಕೋಟಿ ರೂ. ಖರೀದಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರಿಗೆ ಪ್ರಸ್ತಾವನೆಗೂ, ಅನುಮೋದನೆಗೂ, ಖರ್ಚಿಗೆ ವ್ಯತ್ಯಾಸ ಗೊತ್ತಿಲ್ಲ. ನನ್ನ ಇಲಾಖೆಗೆ 815 ಕೋಟಿ ರೂ. ಮೊತ್ತದ ಪ್ರಸ್ತಾಪ ಬಂದಿದೆ ಅಷ್ಟೇ. ಯಾವುದೂ ಮಂಜೂರಾಗಿಲ್ಲ. ನಾವು ಖರ್ಚು ಮಾಡಿದ್ದು ಕೇವಲ 33 ಕೋಟಿ ರೂ. ಮಾತ್ರ ಎಂದು ಸ್ಪಷ್ಟಪಡಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆ 10 ಪರಿಕರಗಳನ್ನು ಖರೀದಿ ಮಾಡಿದ್ದು, ಒಟ್ಟು 33 ಕೋಟಿ ರೂ. ಖರ್ಚಾಗಿದೆ. ನಿಮ್ಮನ್ನು ಯಾರೂ ಕ್ಷಮಿಸಲ್ಲ. ಮಾಹಿತಿ ಕೊರತೆಯಿಂದಲೂ ಆರೋಪ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಪುನಶ್ಚೇತನ ಮಾಡುವ ದುರಾಲೋಚನೆ ಅವರದ್ದಾಗಿದೆ ಎಂದು ಕಿಡಿಕಾರಿದರು.

Last Updated : Jul 23, 2020, 7:58 PM IST

ABOUT THE AUTHOR

...view details