ಬೆಂಗಳೂರು: ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಸಿಐಡಿ ಪೊಲೀಸರು, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಗಳು ಸೇರಿ ಐವರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಐವರು ಸೇರಿ 21ಕ್ಕೆ ಏರಿಕೆಯಾಗಿದೆ.
ಬೆಂಗಳೂರು ವಲಯದ ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ, ಪಠ್ಯಪುಸ್ತಕ ನಿರ್ದೇಶಕ ಮಾದೇಗೌಡ, ನಿವೃತ್ತ ಜಂಟಿ ನಿರ್ದೇಶಕರಾದ ಜಿ.ಆರ್ ಬಸವರಾಜು, ಕೆ. ರತ್ನಯ್ಯ, ಡಿ. ಕೆ ಶಿವಕುಮಾರ್ ಬಂಧಿತರು. ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಅಕ್ಟೋಬರ್ 1ರ ವರೆಗೆ ಕಸ್ಟಡಿಗೆ ಪಡೆಯಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
2012-13ನೇ ಮತ್ತು 2014-15ನೇ ಸಾಲಿನಲ್ಲಿ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ. ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, 15 ಶಿಕ್ಷಕರು ಮತ್ತು ಎಫ್‌ಡಿಎ ಪ್ರಸಾದ್ ಎಂಬಾತನನ್ನು ಬಂಧಿಸಿದೆ.
ಹೆಚ್ಚಿನ ತನಿಖೆ ಸಲುವಾಗಿ ಪ್ರಸಾದ್‌ನನ್ನು ಕಸ್ಟಡಿಗೆ ಪಡೆದು ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಕ್ರಮ ನೇಮಕಾತಿ ಇಡೀ ರಾಜ್ಯದಲ್ಲಿ ನಡೆದಿರುವುದು ಬೆಳಕಿಗೆ ಬಂದಿತ್ತು.
ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಫ್‌ಡಿಎ ಪ್ರಸಾದ್, ಅಭ್ಯರ್ಥಿಗಳನ್ನು ಸಂಪರ್ಕ ಮಾಡಿ ಮೇಲಧಿಕಾರಿಗಳ ಮೂಲಕ ಡೀಲ್ ಮುಗಿಸಿದ್ದ ವಿಷಯ ಬಾಯ್ಬಿಟ್ಟಿದ್ದ. ಪ್ರತಿ ಅಭ್ಯರ್ಥಿಯಿಂದ 10 ರಿಂದ 15 ಲಕ್ಷ ರೂ. ಪಡೆದು ನೌಕರಿ ಕೊಡಿಸುವುದು ಬೆಳಕಿಗೆ ಬಂದಿತ್ತು. ಇದರ ಜಾಡು ಹಿಡಿದು ತನಿಖೆ ಮುಂದುವರಿಸಿದ ಸಿಐಡಿ ಅಧಿಕಾರಿಗಳು, ಶಿಕ್ಷಣ ಇಲಾಖೆ ನೇಮಕಾತಿ ವಿಭಾಗದ ಬೆಂಗಳೂರು ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಂಟಿ ನಿರ್ದೇಶಕರು ಅಕ್ರಮ ಎಸಗಿರುವುದು ಸಾಕ್ಷ್ಯ ಸಮೇತ ದೃಢವಾಗಿತ್ತು. ಇದರ ಆಧಾರದ ಮೇಲೆ ಸಿಐಡಿ ಬಂಧಿಸಿದೆ.
ಸಿಐಡಿ ಅಧಿಕಾರಿಗಳು ಮಾಹಿತಿ: ಸಹ ಶಿಕ್ಷಕರ ಹುದ್ದೆಗೆ ಅರ್ಹತೆ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಹಣ ಪಡೆದು ನೇಮಕಾತಿ ಮಾಡಿದ್ದರು. ಐವರು ಅಧಿಕಾರಿಗಳೇ, ನೇಮಕಾತಿ ದಾಖಲೆಗಳನ್ನು ಸಿದ್ಧಪಡಿಸಿ ಸಹಿ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತರ ಪೈಕಿ ಕೆಲವರು ಕೆಲವೇ ವರ್ಷಗಳಲ್ಲಿ ಮುಂಬಡ್ತಿ ಪಡೆದು ಆಯಕಟ್ಟಿನ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆ ಅಕ್ರಮ ನೇಮಕಾತಿಯನ್ನು ಸಹ ನಡೆಸಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಓದಿ:ನೇಮಕಾತಿ ಹಗರಣ.. ವಿಜಯಪುರದಲ್ಲಿ ಮೂವರು ಶಿಕ್ಷಕರ ಅಮಾನತು