ಕರ್ನಾಟಕ

karnataka

ETV Bharat / state

ಕಡಿಮೆ ಬೆಲೆಗೆ ದುಬೈನಿಂದ ಚಿನ್ನ ಕೊಡಿಸುವುದಾಗಿ ಮೋಸ: ಪಾನ್ ಬ್ರೋಕರ್​​ನಿಂದ 80 ಲಕ್ಷ ಸುಲಿಗೆ ಮಾಡಿದ್ದ ಐವರ ಬಂಧನ - five arrested in extorting case

ಕಡಿಮೆ ಬೆಲೆಗೆ ದುಬೈನಿಂದ ಚಿನ್ನ ತರಿಸಿಕೊಡುವುದಾಗಿ ವ್ಯಕ್ತಿಯಿಂದ 80 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ಐವರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

five-arrested-in-extorting-80-lakhs-from-man-in-bengaluru
ಕಡಿಮೆ ಬೆಲೆಗೆ ದುಬೈನಿಂದ ಚಿನ್ನ ಕೊಡಿಸುವುದಾಗಿ ಮೋಸ : ಪಾನ್ ಬ್ರೋಕರ್​​ನಿಂದ 80 ಲಕ್ಷ ಸುಲಿಗೆ ಮಾಡಿದ್ದ ಐವರ ಬಂಧನ

By ETV Bharat Karnataka Team

Published : Dec 19, 2023, 6:55 PM IST

ಬೆಂಗಳೂರು :ದುಬೈನಿಂದ ಕಡಿಮೆ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ಬಳಿಕ ಆತನಿಗೆ ಮಚ್ಚಿನಿಂದ ಹಲ್ಲೆ ಮಾಡಿ 80 ಲಕ್ಷ ಸುಲಿಗೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್​ನ ರಾಬರ್ಟ್​ಸನ್ ಪೇಟೆಯ ಸಂಕೇತ್ ಜೈನ್ ಎಂಬುವವರೇ ಹಣ ಕಳೆದುಕೊಂಡವರು. ಸಂಕೇತ್​ ಜೈನ್​ ನೀಡಿದ ದೂರಿನ ಮೇರೆಗೆ ಮೊಹಮ್ಮದ್ ರಿಜ್ವಾನ್, ಇರ್ಫಾನ್‌, ಸತೀಶ್, ದಿವಾಕರ್, ಆಶ್ರಫ್​ ಎಂಬುವರನ್ನ ಬಂಧಿಸಲಾಗಿದೆ. ಬಂಧಿತರಿಂದ 55 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳು

ಸಂಕೇತ್ ತಂದೆ ಕೆಜಿಎಫ್‌ನಲ್ಲಿ ಕಳೆದ 25 ವರ್ಷಗಳಿಂದ ಚಿನ್ನ- ಬೆಳ್ಳಿ ಪಾಲಿಶ್ (ಪಾನ್ ಬ್ರೋಕರ್) ಅಂಗಡಿ ಇಟ್ಟುಕೊಂಡಿದ್ದರು‌. ಹೀಗಾಗಿ ಚಿನ್ನ ವ್ಯಾಪಾರದ ಬಗ್ಗೆ ಸಂಕೇತ್ ಜ್ಞಾನ ಹೊಂದಿದ್ದ. ಜೊತೆಗೆ ಬೆಂಗಳೂರಿನಲ್ಲಿರುವ ಅಕ್ಕನ ಮನೆಗೆ ಹೋಗಿ ಬರುತ್ತಿದ್ದ.‌ ಈ ವೇಳೆ, ಕರೀಂಖಾನ್ ಎಂಬುವರ ಪರಿಚಯವಾಗಿತ್ತು. ಈ ವೇಳೆ, ಸಂಕೇತ್​ನ ವೃತ್ತಿ ಬಗ್ಗೆ ತಿಳಿದುಕೊಂಡ ಕರೀಂ ಖಾನ್​, ನನ್ನ ಅಳಿಯ ದುಬೈನಿಂದ ಕಡಿಮೆ ಬೆಲೆಗೆ ಚಿನ್ನ ತಂದು ಮಾರಾಟ ಮಾಡುತ್ತಾನೆ. ನಿನಗೆ ಬೇಕಾದರೆ ಖರೀದಿಸಿ ಸುಲಭವಾಗಿ ಹಣ ಸಂಪಾದನೆ ಮಾಡಬಹುದು ಎಂದಿದ್ದ.‌ ಆರಂಭದಲ್ಲಿ ಸಂಕೇತ್ ಇದನ್ನು ಲಘುವಾಗಿ ಪರಿಗಣಿಸಿದ್ದ. ಕೆಲ ತಿಂಗಳ ಬಳಿಕ ಅಕ್ಕನ ಮದುವೆಗೆ ಹಣದ ಕೊರತೆ ಎದುರಾಗಿತ್ತು.

ಈ ವೇಳೆ‌ ಕರೀಂಖಾನ್ ಹೇಳಿದ ಮಾತನ್ನು ನೆನಪಿಸಿಕೊಂಡು ಆತನ ಮೂಲಕ ಆರೋಪಿ ಮೊಹಮ್ಮದ್ ರಿಜ್ವಾನ್ ಎಂಬಾತನನ್ನು ಸಂಪರ್ಕಿಸಿದ್ದನು. ಶಂಕರಮಠದಲ್ಲಿ ಜಿಮ್​ವೊಂದರ ಮಾಲೀಕನಾಗಿರುವ ರಿಜ್ವಾನ್, ಸಂಬಂಧಿಕರೊಬ್ಬರು ದುಬೈನಲ್ಲಿದ್ದು, ಅವರ ಮೂಲಕ ಒಂದೂವರೆ ಕೆ.ಜಿ ಚಿನ್ನ ನೀಡುತ್ತೇನೆ. ಇದಕ್ಕೆ 1 ಕೋಟಿ ರೂ. ಆಗಲಿದ್ದು ಹಣ ತರುವಂತೆ ರಿಜ್ವಾನ್​ ಹೇಳಿದ್ದ. ಇದರಂತೆ ಮನೆಯಲ್ಲಿದ್ದ ದುಡ್ಡು ಸೇರಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ಸಾಲ ಪಡೆದು 80 ಲಕ್ಷ ಹಣ ಒಗ್ಗೂಡಿಸಿ ಆರೋಪಿ ಸೂಚಿಸಿದ ಸ್ಥಳಕ್ಕೆ ಸಂಕೇತ್ ತೆರಳಿದ್ದ.

ಈ ವೇಳೆ ಸಂಕೇತ್​ ರಿಜ್ವಾನ್​ನನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು ಹೋಗುವಾಗ ನಿರ್ಜನ ಪ್ರದೇಶದಲ್ಲಿ ಪೂರ್ವಯೋಜಿತ ಸಂಚಿನಂತೆ ನಾಲ್ವರ ಗ್ಯಾಂಗ್ ಕಾರನ್ನು ಅಡ್ಡಗಟ್ಟಿ ಮಚ್ಚಿನಿಂದ ಸಂಕೇತ್ ಮೇಲೆ ಹಲ್ಲೆ ನಡೆಸಿತ್ತು. ಬಳಿಕ ಸಂಕೇತ್​ ಬಳಿಯಿದ್ದ 80 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ :ಹಾಡಹಗಲೇ ಪಿಜಿಗಳಿಗೆ ನುಗ್ಗಿ ಲ್ಯಾಪ್​ಟಾಪ್ ಕದಿಯುತ್ತಿದ್ದ ಮೂವರ ಬಂಧನ: 50ಕ್ಕೂ ಹೆಚ್ಚು ಲ್ಯಾಪ್​ಟಾಪ್ ವಶ

ABOUT THE AUTHOR

...view details