ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ, ಕರ್ನಾಟಕ ಮುನಿಸಿಪಾಲಿಟಿಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ರೇಷ್ಮೆಹುಳು ಬಿತ್ತನೆ, ರೇಷ್ಮೆ ಗೂಡು ಮತ್ತು ರೇಷ್ಮೆ ನೂಲು ತಿದ್ದುಪಡಿ ವಿಧೇಯಕ ಮತ್ತು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಬಿಬಿಎಂಪಿ ತಿದ್ದುಪಡಿ ವಿದೇಯಕ : ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ-2022 ಮಂಡಿಸಿ ಮಾತನಾಡಿದ ಜೆ ಸಿ ಮಾಧುಸ್ವಾಮಿ, ಒಬಿಸಿಗೆ 33 ಪರ್ಸೆಂಟ್ ಮೀಸಲಾತಿ ಇಡಲಾಗಿತ್ತು. ಈಗ ಎಸ್ಸಿ, ಎಸ್ಟಿ, ಒಬಿಸಿ ಎಲ್ಲ ಸೇರಿ ಶೇ. 50 ಮೀರದಂತೆ ಎಂದು ತಿದ್ದುಪಡಿ ಮಾಡಲಾಗಿದೆ ಇದಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಎಲ್ಲೆಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೋ ಆ ಕಡೆ ಹೆಚ್ಚಿನ ವಾರ್ಡ್ ಮಹಿಳಾ ಮೀಸಲು ಅಥವಾ ಎಸ್ಟಿ ಮೀಸಲು ಮಾಡಲಾಗಿದೆ. ರಾಜಕೀಯಕೋಸ್ಕರ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಮೀಸಲಾತಿ ಆಗಿದೆ. ಇದರಿಂದ ಬೆಂಗಳೂರಿಗೆ ಒಳ್ಳೆಯದಾಗಲ್ಲ ಎಂದು ಆರೋಪಿಸಿದರು.
ಚುನಾವಣೆ ಮುಂದೂಡುವ ಹುನ್ನಾರ : ಚುನಾವಣೆ ಮುಂದೂಡುವ ಹುನ್ನಾರದ ಅನುಮಾನ ಕಾಣುತ್ತಿದೆ. ಹಾಗಾಗಿ ಪೂರ್ವಾಗ್ರಹ ಪೀಡಿತವಿಲ್ಲದೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯ ಬೋಜೇಗೌಡ, ಗೆಲ್ಲುವ ಅಭ್ಯರ್ಥಿ ಸೋಲಿಸಲು ಮೀಸಲಾತಿ ದುರ್ಬಳಕೆ ಹಿಂದೆಯೂ ನಡೆದಿದೆ. ಈ ರೀತಿ ಆಗಬಾರದು, ವಿಧಾನಸಭೆ ಚುನಾವಣೆವರೆಗೂ ಪಾಲಿಕೆ ಚುನಾವಣೆ ಮುಂದೂಡುವ ಪ್ರಯತ್ನ ನಡೆದಂತಿದೆ. ಹಾಗಾಗಿ ಚುನಾವಣೆ ಯಾವಾಗ ಎನ್ನುವುದನ್ನು ತಿಳಿಸಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯ ತಿಪ್ಪೇಸ್ವಾಮಿ, ಯಾವಾಗ ಚುನಾವಣೆ ನಡೆಸಲಾಗುತ್ತದೆ ಎಂಬುದನ್ನು ಪ್ರಕಟಿಸುವಂತೆ ಆಗ್ರಹಿಸಿದರು. ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಮಾತನಾಡಿ, ಕಾಂತರಾಜ್ ಆಯೋಗದ ವರದಿ ಮಂಡನೆಯಾಗಿಲ್ಲ, ಯಾವ ಡೇಟಾ ಇರಿಸಿ ಭಕ್ತವತ್ಸಲ ಸಮಿತಿ ಮೀಸಲಾತಿ ನೀಡುತ್ತಿದೆ ಎಂದು ಪ್ರಶ್ನಿಸಿದರು.
ಕಾಂತರಾಜ್ ಆಯೋಗವನ್ನೂ ಪರಿಗಣನೆ : ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಕಾಂತರಾಜ್ ವರದಿ ಒಪ್ಪುವುದಾಗಿ ನಾವು ಹೇಳಿಲ್ಲ, ಮೀಸಲಾತಿ ವಿಚಾರದಲ್ಲಿ ಟೆಕ್ನಿಕಲ್ ಇಶ್ಯೂ ಇದೆ. ಕೋರ್ಟ್ ಹಿಂದುಳಿದ ವರ್ಗದ ಯೂನಿಟ್ ವೈಸ್ ರಿಸರ್ವೇಷನ್ ಮಾಡಿ ಎಂದಿದೆ. ಹಾಗಾಗಿ ಕಾಂತರಾಜ್ ಆಯೋಗ ಸೇರಿದಂತೆ ಹಿಂದಿನ ವರದಿ ಪರಿಶೀಲನೆ ಮಾಡಲಾಗುತ್ತದೆ. ಈಗಾಗಲೇ ಎರಡು ಸಭೆ ಮಾಡಲಾಗಿದೆ, ಸಿದ್ದರಾಮಯ್ಯ ಸಮಯ ನೀಡಿದರೆ ಮತ್ತೊಂದು ಸಭೆ ಮಾಡಲು ಸಿದ್ಧರಿದ್ದೇವೆ. ಬಿಬಿಎಂಪಿ ಚುನಾವಣೆ ಕುರಿತ ಅವಧಿ ಮತ್ತು ಮೀಸಲಾತಿ ಎರಡೂ ಸರ್ಕಾರದ ಪರಿಶೀಲನೆಯಲ್ಲಿದೆ ಎನ್ನುವ ಭರವಸೆ ನೀಡಿ ವಿಧೇಯಕ ಅಂಗೀಕರಿಸುವಂತೆ ಸದನವನ್ನು ಕೋರಿದರು. ನಂತರ ಧ್ವನಿ ಮತದ ಮೂಲಕ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕರಿಸಿತು.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ : ನಂತರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2022 ಮಂಡಿಸಿ ಮಾತನಾಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, 2 ಲಕ್ಷ ಜನಸಂಖ್ಯೆ ಒಳಗೆ ಬಂದರೆ 10 ಸಾವಿರಕ್ಕೆ ಒಬ್ಬ ಸದಸ್ಯ ನೇಮಕ ಇತ್ತು ಈಗ ಅದನ್ನು 2.3 ಲಕ್ಷಕ್ಕೆ ಮಿತಿ ಹೆಚ್ಚಿಸಿದ್ದೇವೆ. 7-9 ಲಕ್ಷ ಇರುವ ಕಡೆ ಜಿಲ್ಲಾ ಪಂಚಾಯತ್ 25 ಸದಸ್ಯರು ಇರಬೇಕು ಎನ್ನುವುದನ್ನು 28 ಮಾಡಿದ್ದೇವೆ. ಸಣ್ಣ ತಿದ್ದುಪಡಿ ಅಂಗೀಕಾರ ಮಾಡಿ ಎಂದು ಮನವಿ ಮಾಡಿದರು. ಪ್ರತಿಪಕ್ಷ ಸದಸ್ಯರು ಕೆಲವೊಂದು ಸಲಹೆ ನೀಡಿ ಬಿಲ್ಗೆ ಸಮ್ಮತಿಸಿದರು. ನಂತರ ಧ್ವನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.
ಕರ್ನಾಟಕ ಮುನಿಸಿಪಾಲಿಟಿಗಳ ತಿದ್ದುಪಡಿ ವಿಧೇಯಕ-2022ಮಂಡಿಸಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಸೆಕ್ಷನ್ 3 ರನ್ನು ರಿಪೀಲ್ ಮಾಡಲು ತಿದ್ದುಪಡಿ ಮಾಡಲಾಗಿದೆ.ಜನರಿಗಾಗುತ್ತಿರುವ ಸಮಸ್ಯೆ ತಪ್ಪಿಸಲು ಈ ತಿದ್ದುಪಡಿ ತರಲಾಗುತ್ತಿದೆ ಇದು ಜನಸ್ನೇಹಿ ತಿದ್ದುಪಡಿಯಾಗಿದೆ ಎಂದರು.