ಬೆಂಗಳೂರು: ಸಾಂಪ್ರದಾಯಿಕ ಒಳನಾಡು ಮೀನುಗಾರಿಕೆಗೆ ಸರ್ಕಾರ ಸಂಪೂರ್ಣ ಉತ್ತೇಜನ ನೀಡಲಿದೆ ಎಂದು ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. ವಿಕಾಸಸೌಧದಲ್ಲಿ ಒಳನಾಡು ಮೀನುಗಾರಿಕೆ ಸಮಸ್ಯೆಗಳ ಕುರಿತು ಶಾಸಕರು, ಮೀನುಗಾರಿಕೆ ಸಂಘಟನೆಗಳೊಂದಿಗೆ ಸಭೆ ನಡೆಸಿದ ಅವರು, ಸಾಂಪ್ರದಾಯಿಕವಾಗಿ ಮೀನುಗಾರಿಕೆ ಮಾಡಿ ಬದುಕು ಕಟ್ಟಿಕೊಳ್ಳುವ ಮೀನುಗಾರರಿಗೆ ಹಾಗೂ ಒಳನಾಡು ಮೀನುಗಾರಿಕೆಗೆ ಸರ್ಕಾರದಿಂದ ಉತ್ತೇಜನ ನೀಡಲಾಗುವುದು ಎಂದರು.
ಒಳನಾಡು ಮೀನುಗಾರಿಕೆಯಲ್ಲಿ ತೊಡಗಿರುವವರು ಆಯಾ ಪ್ರದೇಶಗಳಲ್ಲಿ ಸಂಘಟಿತರಾಗಿ ಗುಂಪುಗಳಾಗಬೇಕು. ಆಗ ಸರ್ಕಾರದಿಂದ ಸೌಲಭ್ಯ ವಿತರಣೆಗೆ ಅನುಕೂಲವಾಗಲಿದೆ. ಅಲ್ಲದೇ, ಮೀನು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕ್ರಮ ವಹಿಸಲಾಗುವುದು. ಮೀನುಗಾರರ ಕುಟುಂಬದವರು ತಮ್ಮ ಭೂಮಿಯಲ್ಲಿ ಮೀನುಗಾರಿಕೆಗೆ ಹೊಂಡಗಳನ್ನು ಮಾಡುವುದಾದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೊಂಡ ನಿರ್ಮಿಸಲು ಅವಕಾಶ ಕಲ್ಪಿಸಲಾಗುವುದು ಅಲ್ಲದೇ ಅವರಿಗೆ ಉಚಿತ ಮೀನುಮರಿಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.