ಮಹದೇವಪುರ(ಬೆಂಗಳೂರು):ಕಲುಷಿತ ನೀರು ಸೇರಿ ಲಕ್ಷಾಂತರ ಮೀನುಗಳು ಸಾವಿಗೀಡಾದ ಘಟನೆ ಮಹದೇವಪುರ ಕ್ಷೇತ್ರದ ಹಾಲನಾಯಕನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹರಳೂರು ಕೆರೆಯಲ್ಲಿ ನಡೆದಿದೆ.
ಕೆರೆಯ ಸುತ್ತಮುತ್ತಲಿನ ಬಹುಮಹಡಿ ವಸತಿ ಸಮುಚ್ಚಯಗಳ ಕೊಳಚೆ ನೀರು ಕೆರೆಗೆ ಸೇರಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ. ಇತ್ತೀಚೆಗೆ ಧಾರಾಕಾರವಾಗಿ ಸುರಿದ ಮಳೆಯಿಂದ ಕಾಲುವೆಗಳೆಲ್ಲ ತುಂಬಿ ಎಲ್ಲೆಂದರಲ್ಲಿ ನೀರು ಹರಿದಿದ್ದು, ಚರಂಡಿಗಳಲ್ಲಿ ಹರಿಯಬೇಕಿದ್ದ ಕಲುಷಿತ ನೀರು ನೇರವಾಗಿ ಕೆರೆ ಸೇರಿದೆ. ಇದರ ಪರಿಣಾಮ ಕೆರೆ ನೀರು ಮಲಿನವಾಗಿ ಸುಮಾರು ನಾಲ್ಕು ಟನ್ ಮೀನುಗಳು ಸಾವನ್ನಪ್ಪಿವೆ ಎಂಬ ಮಾಹಿತಿ ದೊರೆತಿದೆ.
ವಿಷಕಾರಿ ಚರಂಡಿ ನೀರನ್ನು ಕೆರೆಗೆ ಹರಿಸಬಾರದು ಎನ್ನುವ ಕಾರಣಕ್ಕೆ ನಿರ್ಮಿಸಿರುವ ಬ್ಯಾರಿಕೇಡ್ಗಳು ಸ್ವಲ್ಪ ಸಮಯದವರೆಗೆ ಮಾತ್ರ ಕೊಳಕು ನೀರು ಹಿಡಿದಿಟ್ಟುಕೊಳ್ಳುತ್ತವೆ. ಆದರೆ, ಕೆಲವೇ ಹೊತ್ತಿನಲ್ಲಿ ಅದು ಉಕ್ಕಿ ಹರಿದು ಕೆರೆಗೆ ಸೇರುವ ಕಾರಣ ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಲಾಗುತ್ತಿದೆ.
ಕೆರೆಯಲ್ಲಿನ ಸತ್ತ ಮೀನುಗಳನ್ನು ತೆರವುಗೊಳಿಸಿ ಹಳ್ಳತೋಡಿ ಮುಚ್ಚಲಾಗಿದೆ. ಸುತ್ತಲೂ ನಾನಾ ಜಾತಿಯ ಪಕ್ಷಿ ಸಂಕುಲವೇ ನೆಲೆಸಿದ್ದು ಮುಂದಿನ ದಿನಗಳಲ್ಲಿ ಅವುಗಳಿಗೂ ಅಪಾಯ ಎದುರಾಗಲಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ. ಕಲುಷಿತ ನೀರು ಕೆರೆಗೆ ಸೇರದ ರೀತಿಯಲ್ಲಿ ಎಚ್ಚರವಹಿಸಬೇಕು. ಕೆರೆಯ ಸುತ್ತಮುತ್ತ ದುರ್ವಾಸನೆ ಬರುತ್ತಿದೆ. ವಾಯು ವಿಹಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರು:ಕೆರೆಗೆ ವಿಷ ತ್ಯಾಜ್ಯ, ಮೀನುಗಳ ಮಾರಣ ಹೋಮ