ಬೆಂಗಳೂರು: ಕೋವಿಡ್-19 ನಂತರ ಮೊದಲ ಏರೋ ಇಂಡಿಯಾ ಶೋ ನಡೆಯುತ್ತಿದ್ದು, ಲಘು ವಿಮಾನಗಳಾದ ಸಾರಂಗ್ ಹಾಗೂ ಸೂರ್ಯಕಿರಣ್ ಮೊದಲ ಬಾರಿಗೆ ಒಟ್ಟಿಗೆ ವಾಯು ಪ್ರದರ್ಶನ ನೀಡುತ್ತಿವೆ.
ಕೋವಿಡ್ -19 ರ ಮುನ್ನೆಚ್ಚರಿಕೆ;ಕೊರೊನಾ ಟೆಸ್ಟ್ ಕಡ್ಡಾಯ: ಕೋವಿಡ್-19 ಮಹಾಮಾರಿಯ ಹಿನ್ನೆಲೆಯಲ್ಲಿ ದಿನಕ್ಕೆ ಮೂರು ಸಾವಿರ ಸಾರ್ವಜನಿಕರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಎಲ್ಲರಿಗೂ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ವಾಯುಪಡೆ ಹೇಳಿದೆ.
ನಗರದ ವಾಯು ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಏರ್ ಆಫೀಸರ್ ಕಮಾಂಡರ್ ಶೈಲೇಂದ್ರ ಸೂದ್ ಮಾತನಾಡಿ, 13ನೇ ಆವೃತ್ತಿಯ ಏರೋ ಇಂಡಿಯಾ ಕೋವಿಡ್ ಮಹಾಮಾರಿಯನ್ನು ಗಮನದಲ್ಲಿಟ್ಟುಕೊಂಡು ಪ್ರವೇಶ ಮಿತಿಯನ್ನು ದಿನಕ್ಕೆ ಮೂರು ಸಾವಿರಕ್ಕೆ ಸೀಮಿತಗೊಳಿಸಲಾಗಿದ್ದು, ಪಾಸ್ ಜೊತೆ ಕೋವಿಡ್ ನೆಗೆಟಿವ್ ಫಲಿತಾಂಶ ಅಗತ್ಯ ಎಂದರು.
ಕಳೆದ ಬಾರಿ ಅವಘಡದಿಂದ ಪಾಠ ಕಲಿತ ಆಯೋಜಕರು:35 ಸಭೆಗಳನ್ನ ರಾಜ್ಯ ಸರ್ಕಾರದ ಜೊತೆ ನಡೆಸಲಾಗಿದೆ. ಕಳೆದ ಬಾರಿ ನಡೆದ ಅವಘಡಗಳು ಈ ಬಾರಿ ನಡೆಯಬಾರದು ಎಂಬ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ರಕ್ಷಣಾ ಸಿಬ್ಬಂದಿ ಕೈಗೊಂಡಿದ್ದಾರೆ.
2019ರಲ್ಲಿ ಏರೋ ಇಂಡಿಯಾದ 300ಕ್ಕೂ ಹೆಚ್ಚಿನ ಕಾರುಗಳು ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿಗೆ ಆಹುತಿಯಾಗಿ ಭಾರಿ ನಷ್ಟ ಸಂಭವಿಸಿತ್ತು. ಹೀಗಾಗಿ ಅಗ್ನಿಶಾಮಕ ದಳದ ಮುಖ್ಯಸ್ಥ ದಿನಕ್ಕೆ ಮೂರು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಪಾರ್ಕಿಂಗ್ ಸ್ಥಳದ ಜವಾಬ್ದಾರಿಯನ್ನು ಹೆಚ್ಎಎಲ್ ಹೊತ್ತಿದ್ದು, ಅಗ್ನಿಶಾಮಕ ನಿಯಮಗಳನ್ನ ಅನುಸರಿಸಿದೆ. ಪಾರ್ಕಿಂಗ್ ಸ್ಥಳದಲ್ಲಿ ಹುಲ್ಲು ಕಟಾವು ಮಾಡಲಾಗುತ್ತಿದೆ. ಎಲ್ಲಾ ಪಾರ್ಕಿಂಗ್ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಸೂದ್ ಹೇಳಿದರು.
ರಕ್ಷಣಾ ಸ್ನೇಹಿ ದೃಷ್ಟಿಯಿಂದ ಹಲವು ದೇಶಗಳಿಗೆ ಏರೋ ಇಂಡಿಯಾ ಆಮಂತ್ರಣ ನೀಡಲಾಗಿದೆ. 27 ವಾಯುಪಡೆ ಕಮಿಟಿ ರಚನೆ ಮಾಡಿ, ಎಲ್ಲಾ ಅಡಚಣೆಗಳನ್ನ ಹೆಚ್ಎಎಲ್ ಹಾಗೂ ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಿ ಸರಿಪಡಿಸಲಾಗಿದೆ.
41 ಯುದ್ಧ ವಿಮಾನಗಳ ಪ್ರದರ್ಶನ ನಡೆಯುತ್ತಿದ್ದು, ಬೆಳಗ್ಗೆ 9ರಿಂದ 12 ಹಾಗೂ ಮಧ್ಯಾಹ್ನ 2ರಿಂದ 5ರವರೆಗೆ ನಡೆಯಲಿದೆ. ಒಟ್ಟು 63 ಸ್ಥಿರ ವಾಯು ಪಡೆ ಹಾಗೂ ಸಾರ್ವಜನಿಕ ವಿಮಾನಗಳ ಪ್ರದರ್ಶನ ನಡೆಯಲಿದೆ.
ಓದಿ:ನನಗೆ ಕೊಟ್ಟಿರುವ ಅಬಕಾರಿ ಖಾತೆ ಸಂತೋಷ ತಂದಿದೆ: ಸಚಿವ ಗೋಪಾಲಯ್ಯ
ಪೊಲೀಸ್ ಹಾಗೂ ಸಿಐಎಸ್ಎಫ್ ಪೊಲೀಸ್ ಭದ್ರತೆ ಇರಲಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಸಿಸಿಟಿವಿ ಕಣ್ಗಾವಲು ಇರಲಿದೆ. ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿದ್ದು, 26 ವೈದ್ಯರು, 46 ನರ್ಸ್ ಹಾಗೂ 5 ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿದೆ. ಹಾಗೂ ತುರ್ತು ಪರಿಸ್ಥಿತಿಯಲ್ಲಿ 14 ಸರ್ಕಾರಿ ಅಸ್ಪತ್ರೆಗಳ ಬೆಡ್ಗಳನ್ನ ನಿಯೋಜಿಸಲಾಗಿದೆ. ನೀರಿನ ಬಕೆಟ್ ಸಹಿತ ಹೆಲಿಕಾಪ್ಟರ್ ಕೂಡ ಇರಲಿದೆ.