ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಾಳೆ 8 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಲಾಗುವುದು. ಈ ಸಂಬಂಧ ಇಂದು ಸಿ.ವಿ. ರಾಮನ್ ನಗರ ಸಾರ್ವಜನಿಕ ಆಸ್ಪತ್ರೆಗೆ ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಪ್ರಧಾನಮಂತ್ರಿಗಳು ನಾಳೆ 10.30ಕ್ಕೆ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅದೇ ವೇಳೆ ಬಿಬಿಎಂಪಿ ವ್ಯಾಪ್ತಿಯ 8 ಕೇಂದ್ರ (ವಿಕ್ಟೋರಿಯಾ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ, ಸಿ.ವಿ. ರಾಮನ್ ನಗರ ಜಿ.ಹೆಚ್, ಜಯನಗರ ಜಿ.ಹೆಚ್, ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ಹಾಗೂ ಯಲಹಂಕ ಸಾರ್ವಜನಿಕ ಆಸ್ಪತ್ರೆ) ಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದರು.
ಪ್ರತಿಯೊಂದು ಕೇಂದ್ರದಲ್ಲೂ 100 ಮಂದಿಗೆ ಲಸಿಕೆ ನೀಡಲಾಗುವುದು. ಈಗಾಗಲೇ 1,05,000 ಕೊವಿಶೀಲ್ಡ್ ವ್ಯಾಕ್ಸಿನ್ಗಳನ್ನು ದಾಸಪ್ಪ ಆಸ್ಪತ್ರೆಯ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಿಡಲಾಗಿದೆ. ಇಂದು ವ್ಯಾಕ್ಸಿನ್ಗಳನ್ನು ಕೋಲ್ಡ್ ಚೈನ್ ಪಾಯಿಂಟ್ಗಳಿಗೆ ಕಳುಹಿಸಲಾಗುತ್ತದೆ. ನಾಳೆ ಬೆಳಗ್ಗೆ ಲಸಿಕೆ ನೀಡುವ 8 ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಒಂದು ಕೇಂದ್ರದಲ್ಲಿ ಏನೆಲ್ಲಾ ಸೌಲಭ್ಯಗಳಿರಲಿವೆ ಎಂಬುದನ್ನು ನೋಡಲು ಇಂದು ಸಿ.ವಿ. ರಾಮನ್ ನಗರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಲಸಿಕೆ ಪಡೆಯುವ ಫಲಾನುಭವಿಗಳು ಲಸಿಕೆ ಕೇಂದ್ರಕ್ಕೆ ಬಂದಾಗ ಮೊದಲಿಗೆ ಕೈಗಳಿಗೆ ಸ್ಯಾನಿಟೈಸರ್ ಹಾಕಲಾಗುತ್ತದೆ. ನಂತರ ಥರ್ಮಲ್ ಸ್ಕ್ಯಾನ್ ಹಾಗೂ ಪಲ್ಸ್ ಆಕ್ಸಿಮೀಟರ್ ಮೂಲಕ ತಪಾಸಣೆ ನಡೆಸಲಾಗುತ್ತದೆ. ನಂತರ ಕಾಯುವ ಕೊಠಡಿಗೆ ಬರಲಿದ್ದಾರೆ. ಲಸಿಕೆ ಪಡೆಯುವವರ ಮಾಹಿತಿಯನ್ನು ಕೋವಿನ್ ಪೋರ್ಟಲ್‌ನಲ್ಲಿ ದಾಖಲಿಸಲಾಗಿದ್ದು, ಲ್ಯಾಪ್ಟಾಪ್/ ಕಂಪ್ಯೂಟರ್ನಲ್ಲಿ ಲಸಿಕೆ ಪಡೆಯುವ ಫಲಾನುಭವಿಯ ವಿವರಗಳನ್ನು ಸಿಬ್ಬಂದಿ ಪರಿಶೀಲನೆ ನಡೆಸಿ ಅವರೇ ಎಂಬುದು ಖಾತ್ರಿಯಾದ ಬಳಿಕ ಮೊಬೈಲ್ ಸಂಖ್ಯೆ ನಮೂದಿಸಿ, ಬರುವ ಒ.ಟಿ.ಪಿ ಯನ್ನು ಪೋರ್ಟಲ್ ನಲ್ಲಿ ನಮೂದಿಸಿಕೊಂಡು ಲಸಿಕೆ ನೀಡುವ ಕೊಠಡಿಗೆ ಕಳುಹಿಸಲಿದ್ದಾರೆ.
ಲಸಿಕೆ ನೀಡಿದ ಬಳಿಕ ಪರಿವೀಕ್ಷಣಾ ಕೊಠಡಿಯಲ್ಲಿ ಅರ್ಧ ಗಂಟೆ ವಿಶ್ರಾಂತಿ ಪಡೆಯಬೇಕು. ಈ ವೇಳೆ ಲಸಿಕೆ ನೀಡಿದವರಿಗೆ ಏನಾದರೂ ಆರೋಗ್ಯ ಸಮಸ್ಯೆಯಾದರೆ ಪರಿವೀಕ್ಷಣಾ ಕೊಠಡಿಯಲ್ಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ. ಇನ್ನೂ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದರೆ ಕೂಡಲೆ ಕೇಂದ್ರಕ್ಕೆ ಲಿಂಕ್ ಮಾಡಿರುವ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕಳುಹಿಸಲಾಗುತ್ತದೆ ಎಂದರು.