ಬೆಂಗಳೂರು:ಇಂದಿನಿಂದ ಅಂದರೇ ಜುಲೈ 3 ರಿಂದ 10 ದಿನಗಳ ಕಾಲ 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭವಾಗಲಿದೆ. ಇಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದು, ಹೊಸ ಕಾಂಗ್ರೆಸ್ ಸರ್ಕಾರದ ಮುನ್ನೋಟವನ್ನು ಮುಂದಿಡಲಿದ್ದಾರೆ. ಮಂಗಳವಾರದಿಂದ ಉಭಯ ಸದನ ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ನಡುವಿನ ಸದನ ಕದನಕ್ಕೆ ಸಾಕ್ಷಿಯಾಗಲಿದೆ.
10 ದಿನಗಳ ಕಾಲ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನ ನಡೆಯಲಿದ್ದು, ಇಂದು ಜಂಟಿ ಅಧಿವೇಶನ ಉದ್ದೇಶಿಸಿ ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಜು.7ಕ್ಕೆ ಸಿಎಂ ಸಿದ್ದರಾಮಯ್ಯ ಹೊಸ ಬಜೆಟ್ ಮಂಡನೆ ಮಾಡಲಿದ್ದಾರೆ. ಸೋಮವಾರದಿಂದ ಆರಂಭವಾಗಲಿರುವ ಹೊಸ ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ ಅನೇಕ ಸದನ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯಪಾಲರ ಭಾಷಣದ ಮೂಲಕ ಹೊಸ ಸರ್ಕಾರದ ಮುನ್ನೋಟ : ಪ್ರಚಂಡ ಬಹುಮತದೊಂದಿಗೆ ಗದ್ದುಗೆ ಏರಿರುವ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ತನ್ನ ಮುನ್ನೋಟವನ್ನು ಮುಂದಿಡಲಿದೆ. ರಾಜ್ಯಪಾಲರ ಭಾಷಣ ಏನಿರಲಿದೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ. ಬಹುತೇಕ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿನ ಅಂಶಗಳೇ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖವಾಗಲಿದೆ. ಸರ್ವಜನಾಂಗದ ಶಾಂತಿಯ ತೋಟದ ಪರಿಕಲ್ಪನೆಯಲ್ಲಿ ರಾಜ್ಯದ ಆಡಳಿತ ಇರಲಿದ್ದು, ರಾಜ್ಯದಲ್ಲಿ ಸರ್ವಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಯೋಜನೆ ರೂಪಿಸುವುದನ್ನು ಒತ್ತಿಹೇಳುವ ಸಾಧ್ಯತೆ ಇದೆ.
ಹಾಗು ರಾಜ್ಯದಲ್ಲಿ ಕೋಮು ಸೌಹಾರ್ದತೆ, ಕಾನೂನು ಸುವ್ಯವಸ್ಥೆ, ಸಾಮಾಜಿಕ ನ್ಯಾಯ, ರೈತರ ಕಲ್ಯಾಣ, ಬಡವರ ಕಲ್ಯಾಣ, ಮಹಿಳೆಯರ ಕಲ್ಯಾಣದ ಬಗ್ಗೆ ಕಾರ್ಯಕ್ರಮ ಅನುಷ್ಠಾನಗೊಳಿಸುವ ಬಗ್ಗೆ ಉಲ್ಲೇಖ ಮಾಡುವ ಸಾಧ್ಯತೆ ಇದೆ. ನೈತಿಕ ಪೊಲೀಸ್ ಗಿರಿ, ಕೋಮು ಸಂಘರ್ಷ ನಿಯಂತ್ರಣ, ಡ್ರಗ್ಸ್ ನಿಯಂತ್ರಣ, ಭ್ರಷ್ಟಾಚಾರ ರಹಿತ ಜನಪರ ಆಡಳಿತ ನೀಡುವ ಬಗ್ಗೆ ಭಾಷಣದಲ್ಲಿ ಉಲ್ಲೇಖವಿರುವ ಸಾಧ್ಯತೆ ಇದೆ. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯವನ್ನು ಹೂಡಿಕೆಯಲ್ಲಿ ಅಗ್ರಗಣ್ಯ ಮಾಡಲು, ಬ್ರಾಂಡ್ ಬೆಂಗಳೂರು ಮುನ್ನೋಟ, ನೀರಾವರಿ ಯೋಜನೆಗಳ ಅನುಷ್ಠಾನದ ಆದ್ಯತೆ ಬಗ್ಗೆ ರಾಜ್ಯಪಾಲರು ಭಾಷಣದಲ್ಲಿ ಹೇಳುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಮುಖವಾಗಿ ಪಂಚ ಗ್ಯಾರಂಟಿಗಳ ಮೂಲಕ ಯಾವ ರೀತಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಮಹಿಳೆಯರು, ಬಡವರಿಗೆ, ಯುವಕರು, ನಿರುದ್ಯೋಗಿಗಳ ಶ್ರೇಯಾಭಿವೃದ್ಧಿಗಾಗಿ ಆದ್ಯತೆ ನೀಡಿದೆ ಎಂಬುದನ್ನು ಒತ್ತಿಹೇಳುವ ಸಾಧ್ಯತೆ ಇದ್ದು, ಜನಪರ, ಕೋಮು ಸೌಹಾರ್ದತೆಯ, ಭ್ರಷ್ಟಾಚಾರ ರಹಿತ, ಸರ್ವ ಜನಾಂಗದ ಕಲ್ಯಾಣ, ಅಭಿವೃದ್ಧಿ ಪರ ಆಡಳಿತದ ಮುನ್ನೋಟ ರಾಜ್ಯಪಾಲದ ಭಾಷಣದಲ್ಲಿರುತ್ತದೆ ಎನ್ನಲಾಗಿದೆ.
ಸದನ ಕಲಹಕ್ಕೆ ಸಿದ್ದರಾಗಿರುವ ಪ್ರತಿಪಕ್ಷ :ಇತ್ತ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರದ ವಿರುದ್ಧ ಸದನದಲ್ಲಿ ಸಮರ ನಡೆಸಲು ಸಿದ್ಧವಾಗಿವೆ. ಒಂದು ತಿಂಗಳ ಸಿದ್ದರಾಮಯ್ಯ ಸರ್ಕಾರದ ಮೇಲೆ ಪ್ರಬಲ ಅಸ್ತ್ರಗಳನ್ನು ಬಳಸಲು ಬತ್ತಳಿಕೆ ಸಿದ್ಧಪಡಿಸಿಕೊಂಡಿವೆ. ಇತ್ತ ವಿಪಕ್ಷ ನಾಯಕನ ಆಯ್ಕೆಗೆ ಕಸರತ್ತು ನಡೆಸುತ್ತಿರುವ ಪ್ರಮುಖ ಪ್ರತಿಪಕ್ಷ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ನ್ನು ಕಟ್ಟಿಹಾಕಲು ಈಗಲೇ ನಿರ್ಧರಿಸಿದೆ. ಪಂಚ ಗ್ಯಾರಂಟಿಗಳ ಜಾರಿಯಲ್ಲಿನ ವೈಫಲ್ಯವನ್ನು ಗುರಿಯಾಗಿಸಿ ಉಭಯ ಸದನಗಳಲ್ಲಿ ಹೋರಾಟ ಮಾಡಲು ಪತಿಪಕ್ಷ ಮುಂದಾಗಿದೆ.
ಜು.4ರಂದು ಸದನದ ಒಳಗೂ ಹಾಗೂ ಹೊರಗೂ ಧರಣಿ ನಡೆಸಲು ಬಿಜೆಪಿ ನಿರ್ಧರಿಸಿದೆ. ವಿಧಾನಸೌಧ ಆವರಣದಲ್ಲಿನ ಗಾಂಧಿ ಪ್ರತಿಮೆ ಮುಂದೆ ಮಾಜಿ ಸಿಎಂ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ದ ಧರಣಿ ನಡೆಸಿದರೆ, ಉಭಯ ಸದನದ ಒಳಗೆ ಬಿಜೆಪಿ ಸದಸ್ಯರು ಷರತ್ತು ಬದ್ಧ ಪಂಚ ಗ್ಯಾರಂಟಿ ಜಾರಿ ವಿರುದ್ಧ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದಾರೆ.
ಇನ್ನು, ಜೆಡಿಎಸ್ ಪಕ್ಷ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆಯ ಟೀಕಾಸ್ತ್ರವನ್ನು ಬಿಡಲು ಮುಂದಾಗಿದೆ. ವಸೂಲಿ ಮಾಡಿ ವರ್ಗಾವಣೆ ಮಾಡುವ ದಂಧೆ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ಕಟ್ಟಿ ಹಾಕಲು ಜೆಡಿಎಸ್ ಪಕ್ಷ ಸನ್ನದ್ಧವಾಗಿದೆ. ಗ್ಯಾರಂಟಿ ಅನುಷ್ಟಾನದಲ್ಲಿನ ಗೊಂದಲ, ಬರ, ಕುಡಿಯುವ ನೀರು ಸಮಸ್ಯೆ ಬಗ್ಗೆ ಸರ್ಕಾರದ ವಿರುದ್ಧ ಸಮರಕ್ಕೆ ಜೆಡಿಎಸ್ ಸಿದ್ಧವಾಗಿದೆ. ಒಟ್ಟಿನಲ್ಲಿ 10 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಮಧ್ಯೆ ಕದನ ಕಲಹ ಏರ್ಪಡುವ ಎಲ್ಲಾ ಮುನ್ಸೂಚನೆ ಸಿಕ್ಕಿದೆ.
ಇದನ್ನೂ ಓದಿ :ಪ್ರತಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆಸಬೇಕೇ?: ಬಿಜೆಪಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ