ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಂಕ್ಷಿ ಶಕ್ತಿ ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ಯೋಜನೆ ಸಂಬಂಧ ಸರ್ಕಾರ ಮೊದಲ ಕಂತಿನ ಪೈಕಿ 125.48 ಕೋಟಿ ರೂ. ಸಹಾಯಾನುದಾನ ಬಿಡುಗಡೆ ಮಾಡಿದೆ. ಮೊದಲ ಕಂತಿನ ಮೊತ್ತ 250.96 ಕೋಟಿ ರೂ. ಆಗಿದ್ದು, ಈ ಪೈಕಿ 125.48 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಶಕ್ತಿ ಯೋಜನೆ ಸಂಬಂಧ ರಾಜ್ಯ ಸರ್ಕಾರ ಮೊದಲ ಕಂತಿನ ಹಣ ಬಿಡುಗಡೆ ಮಾಡಿದೆ. ಆದರೆ, ಮೊದಲ ಕಂತಿನ ಸಂಪೂರ್ಣ ಹಣವನ್ನು ಬಿಡುಗಡೆ ಮಾಡದೇ ಇರುವುದು ರಸ್ತೆ ಸಾರಿಗೆ ನೌಕರರ ಆತಂಕಕ್ಕೆ ಕಾರಣವಾಗಿದೆ. ಜೂ. 11 ರಿಂದ ಶಕ್ತಿ ಯೋಜನೆ ಜಾರಿಯಾಗಿತ್ತು. ಜು. 30ರವರೆಗೆ ಶಕ್ತಿ ಯೋಜನೆಯ ವೆಚ್ಚ 687.49 ಕೋಟಿ ರೂ. ಆಗಿದೆ. ರಾಜ್ಯ ಸರ್ಕಾರ ಜೂ. 11ರಿಂದ ಜೂ.30ರವರೆಗೆ ಶಕ್ತಿ ಯೋಜನೆಯಡಿ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ 259.96 ಕೋಟಿ ರೂ. ವೆಚ್ಚವಾಗಿತ್ತು. ಈ ಹಣವನ್ನು ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಆದರೆ ರಾಜ್ಯ ಸರ್ಕಾರ ಒಟ್ಟು 125.48 ಕೋಟಿ ರೂ. ಅನುದಾನವನ್ನು ಮಾತ್ರ ಬಿಡುಗಡೆ ಮಾಡಿದೆ.
ಯಾವ ನಿಗಮಗಳಿಗೆ ಎಷ್ಟು?: ಅದರಂತೆ ಕೆಎಸ್ಆರ್ಟಿಸಿಗೆ 47.15 ಕೋಟಿ ರೂ., ಬಿಎಂಟಿಸಿಗೆ 21.85 ಕೋಟಿ ರೂ., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 32.57 ಕೋಟಿ ರೂ. ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 23.90 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.