ಬೆಂಗಳೂರು :ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ಬಿಜೆಪಿಯ ಅವಧಿಯಲ್ಲಿ ನಡೆದಿದ್ದ ಅಕ್ರಮದ ತನಿಖೆ ಆರಂಭವಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದಿದ್ದ ಅಕ್ರಮದ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೃಷಿ ಭೂಮಿಗೆ ನೀರು ಒದಗಿಸುವುದು ಉದ್ದೇಶವಾಗಿತ್ತು:ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ನೀರಾವರಿ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ಕೊಳವೆ ಬಾವಿ ಮೂಲಕ ನೀರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶದೊಂದಿಗೆ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆಯಡಿ ಫಲಾನುಭವಿಗಳು ಕೃಷಿ ಭೂಮಿಯಲ್ಲಿ ತಜ್ಞರ ಮೂಲಕ ಗುರುತಿಸಲ್ಪಟ್ಟ ಜಲಬಿಂದು ವ್ಯಾಪ್ತಿಯೊಳಗೆ ಕೊಳವೆಬಾವಿ ಕೊರೆಯಿಸಿ, ನಂತರ ನೀರು ಸಂಗ್ರಹಿಸಲು ಟ್ಯಾಂಕ್‌ನ್ನು ನಿರ್ಮಿಸಿಕೊಟ್ಟು, ಅದಕ್ಕೆ ಅಳವಡಿಸಿದ ಪೈಪ್ ಮೂಲಕ ಕೃಷಿ ಭೂಮಿಗೆ ನೀರನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿತ್ತು. ಯೋಜನೆಯು ಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು.
ಗಂಗಾಕಲ್ಯಾಣ ಯೋಜನೆಯ ಅಕ್ರಮದ ತನಿಖೆಗೆ ಕಾಂಗ್ರೆಸ್ ಮುಂದಾಗಿದೆ:ಆದರೆ, ಯೋಜನೆಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನ ನೀಡಿ ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿಂದೆ 2021ರಲ್ಲಿ ಗಂಗಾಕಲ್ಯಾಣ ಯೋಜನೆ ಅಕ್ರಮ ತಡೆಯಲು ರಚನೆಯಾಗಿದ್ದ ಸದನ ಸಮಿತಿ ತನ್ನ ಮಧ್ಯಂತರ ವರದಿಯನ್ನೂ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಗಂಗಾಕಲ್ಯಾಣ ಯೋಜನೆಯ ಅಕ್ರಮದ ತನಿಖೆಗೆ ಕಾಂಗ್ರೆಸ್ ಮುಂದಾಗಿದೆ.
ಸದ್ಯ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವನ್ನ ಶೀಘ್ರವೇ ಸಿಐಡಿಗೆ ವರ್ಗಾಯಿಸುವ ಸಾಧ್ಯತೆಯಿದೆ.